ಮಂಗಳೂರಿನಿಂದ ಬೆಂಗಳೂರಿಗೆ ಹೋಗ್ತಿದ್ದ ಬಸ್ಸಿನಲ್ಲಿ ಶುರುವಾಯ್ತು ತಿಗಣೆ ಕಾಟ...! ನಟ ಶೋಭರಾಜ್ ಪತ್ನಿಗೆ ಸಿಕ್ತು ಲಕ್ಷ ರೂ. ಪರಿಹಾರ...!!!

  • 31 Dec 2024 03:59:59 PM

ಮಂಗಳೂರು: ಮಂಗಳೂರಿನಿಂದ ಬೆಂಗಳೂರಿಗೆ ಪ್ರಯಾಣ ಮಾಡುತ್ತಿದ್ದ ಮಹಿಳೆಯೋರ್ವಳಿಗೆ ಬಸ್ಸಿನಲ್ಲಿ ತಿಗಣೆ ಕಚ್ಚಿ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಿದ ಪ್ರಕರಣಕ್ಕೆ ಸಂಬಂಧಿಸಿ ಸಂತ್ರಸ್ತ ಮಹಿಳೆಗೆ ಲಕ್ಷ ರೂ.ಯಷ್ಟು ಪರಿಹಾರ ನೀಡುವಂತೆ ಆಯೋಗ ಆದೇಶಿಸಿದ ಅಪರೂಪದ ಸಂಗತಿಯೊಂದು ಬೆಳಕಿಗೆ ಬಂದಿದೆ.

 

ಬಸ್ಸಿನಲ್ಲಿ ತಿಗಣೆ ಕಚ್ಚಿದಕ್ಕೆ ಆಯೋಗಕ್ಕೆ ದೂರು ನೀಡಿದ ನಟ ಶೋಭರಾಜ್ ಪತ್ನಿ...! 

 

ಶೋಭರಾಜ್ ಪಾವೂರು ಅವರ ಪತ್ನಿ ದೀಪಿಕಾ 2022ರ ಆ.16ರಂದು ರಾತ್ರಿ ಸೀ ಬರ್ಡ್ ಟೂರಿಸ್ಟ್ ಬಸ್ ನಲ್ಲಿ ಬೆಂಗಳೂರಿಗೆ ಪ್ರಯಾಣ ಬೆಳೆಸಿದ್ದರು. ಅವರಿಗೆ ಬಸ್‌ನಲ್ಲಿ ತಿಗಣೆ ಕಾಟ ನೀಡಿತ್ತು. ಇದರಿಂದ ಆರೋಗ್ಯ ಕೂಡಾ ಹದಗೆಟ್ಟು ಆಸ್ಪತ್ರೆಗೆ ದಾಖಲಾಗಿದ್ದರು‌. ಆದ್ದರಿಂದ ಸೀ ಬರ್ಡ್‌ ಟೂರಿಸ್ಟ್‌ ಕೊಡಿಯಾಲ್‌ಬೈಲು ಮಂಗಳೂರು, ಸೀ ಬರ್ಡ್‌ ಟೂರಿಸ್ಟ್‌ ಬೆಂಗಳೂರು ಮತ್ತು ರೆಡ್‌ ಬಸ್‌ ಆನ್‌ಲೈನ್‌ ಆ್ಯಪ್‌ ವಿರುದ್ಧ ನಟ ಶೋಭರಾಜ್‌ ಪಾವೂರು ಪತ್ನಿ ಹಾಗೂ ಕಲಾವಿದೆ ದೀಪಿಕಾ ಸುವರ್ಣ ಆಯೋಗಕ್ಕೆ ದೂರು ನೀಡಿದ್ದರು.

 

ಮಹಿಳೆ ನೀಡಿದ ದೂರನ್ನು ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷ ಸೋಮಶೇಖರಪ್ಪ ಕೆ.ಹಂಡಿಗೋಲ್‌ ಮತ್ತು ಶಾರದಮ್ಮ ಎಚ್‌.ಜಿ. ಪರಿಹಾರ ನೀಡುವಂತೆ ಆದೇಶ ನೀಡಿದ್ದಾರೆ.

 

ಸಂತ್ರಸ್ತ ಮಹಿಳೆಗೆ ಲಕ್ಷ ರೂ. ಪರಿಹಾರ ನೀಡುವಂತೆ ಆದೇಶ ನೀಡಿದ ಆಯೋಗ...!!

 

ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತ ಮಹಿಳೆಗೆ 1.29 ಲಕ್ಷ ರೂ. ಅನ್ನು ಶೇ.6 ಬಡ್ಡಿ ವಿಧಿಸಿ ಪರಿಹಾರವಾಗಿ ನೀಡುವಂತೆ ಬಸ್‌ ಮಾಲಕರಿಗೆ ದಕ್ಷಿಣ ಕನ್ನಡ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗ ಆದೇಶಿಸಿದೆ.

 

ವಿಚಾರಣೆ ಕೈಗೆತ್ತಿಕೊಂಡ ಆಯೋಗವು ದೀಪಿಕಾ ಅವರಿಗೆ ಮೆಡಿಕಲ್‌ ಬಿಲ್‌ ಮೊತ್ತ 18,650 ರೂ. ಮತ್ತು ಶೇ.6ರ ವಾರ್ಷಿಕ ಬಡ್ಡಿ ಪಾವತಿಸಬೇಕು. ಬಸ್ಸಿನ ಟಿಕೆಟ್‌ನ ಮೊತ್ತ 840 ರೂ. ಜತೆ ದೂರು ನೀಡಿನ ದಿನಾಂಕದಿಂದ ಇಲ್ಲಿಯವರೆಗೆ ಶೇ.6ರ ವಾರ್ಷಿಕ ಬಡ್ಡಿಯೊಂದಿಗೆ ಮರು ಪಾವತಿಸಬೇಕು.

 

ಮಾನಸಿಕ ಕಿರಿಕಿರಿ, ಆರ್ಥಿಕ ನಷ್ಟ ಮತ್ತು ಇತರ ಕಾರಣಗಳಿಗಾಗಿ 1 ಲಕ್ಷ ರೂ. ಮತ್ತು ಶೇ.6ರ ಬಡ್ಡಿ ಪಾವತಿಸಬೇಕು. ದೂರು, ವ್ಯಾಜ್ಯದ ಮೊತ್ತವಾಗಿ 10 ಸಾವಿರ ರೂ. ಪಾವತಿಸಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.

 

45 ದಿನದಲ್ಲಿ ಈ ಮೊತ್ತವನ್ನು ಪಾವತಿ ಮಾಡದಿದ್ದಲ್ಲಿ ಶೇ.8 ಹೆಚ್ಚುವರಿ ಬಡ್ಡಿಯೊಂದಿಗೆ ಪಾವತಿ ಮಾಡಬೇಕು. ಈ ಆದೇಶವನ್ನು ಉಲ್ಲಂಘಿಸಿದಲ್ಲಿ ಸಿವಿಲ್‌ ಅಥವಾ ಕ್ರಿಮಿನಲ್‌ ಮೊಕದ್ದಮೆ ದಾಖಲಿಸಲು ಅವಕಾಶವಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ. ಒಟ್ಟಿನಲ್ಲಿ ಬಸ್ಸಿನಲ್ಲಿ ಪ್ರಯಾಣಿಸುವಾಗ ತಿಗಣೆ ಕಚ್ಚಿದರೂ ಪರಿಹಾರ ಸಿಗುತ್ತದೆ ಎಂಬ ವಿಚಾರ ಈಗ ಎಲ್ಲಾ ಪ್ರಯಾಣಿಕರಿಗಂತೂ ಮನದಟ್ಟಾಯಿತು...