ಬಂಟ್ವಾಳ: ರೇಷನ್ ಕಾರ್ಡ್ ವಿತರಣೆಯ ಪ್ರಕ್ರಿಯೆಗಾಗಿ ತಾಲೂಕಿನ ಆಡಳಿತ ಸೌಧದ ಆಹಾರ ಶಾಖೆಗೆ ದಿಡೀರ್ ಬೇಟಿ ನೀಡಿದ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು, ಜನರಿಗೆ ಸರಿಯಾದ ಮಾಹಿತಿ ನೀಡಲು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆಯನ್ನು ನೀಡಿದರು.
ಡಿ.30 ಮತ್ತು ಡಿ.31 ರಂದು ನೂರಾರು ಜನರು ಕಚೇರಿಯ ಎದುರು ಸರಣಿ ಸಾಲಿನಲ್ಲಿ ನಿಂತು ತೊಂದರೆ ಅನುಭವಿಸಿದ್ದರು. ಫಲಾನುಭವಿಗಳ ದೂರಿಗೆ ಸ್ಪಂದಿಸಿದ ಶಾಸಕರು ತಕ್ಷಣವೇ ಸ್ಥಳಕ್ಕೆ ಆಗಮಿಸಿ ಸಮಸ್ಯೆ ಕುರಿತಾಗಿ ಮಾಹಿತಿ ಪಡೆದುಕೊಂಡರು.
ರೇಷನ್ ಕಾರ್ಡ್ ವಿತರಣೆಗೆ ಇನ್ನು ಸಮಯವಿದ್ದರೂ, ಡಿ.31 ಕೊನೆಯ ದಿನ ಎಂಬ ಸುಳ್ಳು ಸುದ್ದಿ ಸಾಮಾಜಿಕ ಮಾಧ್ಯಮದಲ್ಲಿ ಹರಡಿದ್ದರಿಂದ ಜನರು ಗೊಂದಲಕ್ಕೊಳಗಾಗಿದ್ದರು. ರೇಷನ್ ಕಾರ್ಡ್ ಪಡೆಯಲು ಇನ್ನು ಕಾಲಾವಕಾಶ ನೀಡಲಾಗಿದ್ದು,ಜನರು ಯಾವುದೇ ಭಯಪಡೆಯಬೇಕಾಗಿಲ್ಲ ಎಂದೂ ಈ ಬಗ್ಗೆ ತಹಶೀಲ್ದಾರ್ ಮೂಲಕ ಅಧಿಕೃತ ಮಾಹಿತಿಯನ್ನು ಮಾಧ್ಯಮದ ಮೂಲಕ ಪ್ರಕಟಿಸಲು ಶಾಸಕರು ಸೂಚಿಸಿದರು.
ಈ ವೇಳೆ ವಿಕಾಸ್ ಪುತ್ತೂರು, ಶಾಂತವೀರ ಪೂಜಾರಿ, ಶಶಿಕಾಂತ್ ಶೆಟ್ಟಿ, ಅನೂಪ್ ಮಯ್ಯ, ಮೋಹನ್ ಪಿ.ಎಸ್., ಪ್ರಣಾಮ್ ಅಜ್ಜಿಬೆಟ್ಟು, ಆನಂದ ಶಂಭೂರು ಇನ್ನಿತರರು ಉಪಸ್ಥಿತರಿದ್ದರು.