ಮಂಗಳೂರು:ಮಂಗಳೂರಿನ ಅರ್ಕುಳದಲ್ಲಿ ಸೋಮವಾರ ಸಂಜೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಬೈಕ್ ಸ್ಕಿಡ್ ಆಗಿ ರಸ್ತೆಗೆ ಎಸೆಯಲ್ಪಟ್ಟ 22 ವರ್ಷದ ಪ್ರವೀತ್ ಕುಮಾರ್ ಮೇಲೆ ವಾಹನವೊಂದು ಹರಿದಿದ್ದು, ಪರಿಣಾಮವಾಗಿ ಯುವಕ ನಡು ರಸ್ತೆಯಲ್ಲೇ ಪ್ರಾಣ ಬಿಟ್ಟಿದ್ದಾನೆ. ಮೃತ ಯುವಕನನ್ನು ಹವ್ಯಾಸಿ ಯಕ್ಷಗಾನ ಕಲಾವಿದ, ವಿಟ್ಲ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿ ಪ್ರವೀತ್ ಕುಮಾರ್ ಎಂದು ಗುರುತಿಸಲಾಗಿದೆ.
ಮಂಗಳೂರಿಗೆ ಬರುತ್ತಿದ್ದ ಪ್ರವೀತ್!
ವಿಟ್ಲ ಕಾಲೇಜಿನ ವಿದ್ಯಾರ್ಥಿಯಾಗಿದ್ದ ಪ್ರವೀತ್ ನಿನ್ನೆ ಡಿ.31ರ ಸಂಜೆ ಕಾಲೇಜು ಮುಗಿಸಿ ಮಂಗಳೂರಿಗೆ ಬರುತ್ತಿದ್ದ ವೇಳೆ ಅರ್ಕುಳದಲ್ಲಿ ಬೈಕ್ ಸ್ಕಿಡ್ ಆಗಿ ಏಕಾಏಕಿ ರಸ್ತೆಗೆ ಎಸೆಯಲ್ಪಟ್ಟಿದ್ದಾನೆ. ಇದೇ ವೇಳೆ ಟಿಪ್ಪರ್ ವಾಹನವೊಂದು ಪ್ರವೀತ್ ತಲೆ ಮೇಲೆ ಹರಿದಿದೆ. ದುರಂತದಲ್ಲಿ ಗಂಭೀರವಾಗಿ ಗಾಯಗೊಂಡ ಇವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಅದ್ಭುತ ಯಕ್ಷ ಕಲಾವಿದ ಪ್ರವೀತ್!
ಪ್ರವೀತ್ ಕುಮಾರ್ ಅದ್ಭುತ ಯಕ್ಷ ಕಲಾವಿದನಾಗಿದ್ದು, ಸಸಿಹಿತ್ಲು ಮೇಳದಲ್ಲಿ ಹಲವು ಪಾತ್ರಗಳನ್ನು ನಿರ್ವಹಿಸಿ ಯಶಸ್ವಿಯಾಗಿದ್ದರು. ಇತ್ತೀಚೆಗಿನ 'ಕತೆಗಾರ್ತಿ ಕಲ್ಪನ' ಪ್ರಸಂಗದ ಕಲ್ಪನಾ ಪಾತ್ರಕ್ಕೆ ಪ್ರವೀತ್ ಕುಮಾರ್ ಜೀವ ತುಂಬಿದ್ದರು. ಇಂತಹಾ ಕಲಾವಿದನನ್ನು ಕಳೆದುಕೊಂಡಿರುವ ಸಸಿಹಿತ್ಲು ಮೇಳ ಕಂಬನಿ ಮಿಡಿದಿದೆ. ಒಟ್ಟಾರೆಯಾಗಿ ಯಕ್ಷಲೋಕಕ್ಕೆ ಅತ್ಯುತ್ತಮ ಕೊಡುಗೆಯಾಗಬೇಕಿದ್ದ ಪ್ರವೀತ್ ಕುಮಾರ್ ಅವರ ಆಕಸ್ಮಿಕ ಸಾವು ಎಲ್ಲರನ್ನೂ ಕಣ್ಣೀರಾಗಿಸಿದೆ.