ಬೆಂಗಳೂರು: ಸಾವಿರಾರು ವರ್ಷಗಳಿಂದ ಮನುಷ್ಯನ ಒಡನಾಡಿ , ನಿಷ್ಠೆಯ ಪ್ರಾಣಿ ಎನಿಸಿಕೊಂಡಿರುವ ನಾಯಿ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಕೆಲವರಂತೂ ಸಾಕು ನಾಯಿಯನ್ನು ಮನೆ ಮಗನಷ್ಟು ಪ್ರೀತಿಯಿಂದ ಸಾಕುತ್ತಾರೆ. ಇಲ್ಲೊಬ್ಬ ಯುವಕನೂ ಕೂಡ ಜರ್ಮನ್ ಶಫರ್ಡ್ ಜಾತಿಗೆ ಸೇರಿದ 'ಬೌನ್ಸಿ' ಎನ್ನುವ ನಾಯಿಯನ್ನು ಮುದ್ದಿನಿಂದ ಸಾಕಿದ್ದ.
ಆದರೆ ಈ ನಾಯಿಯ ಅಕಾಲಿಕ ಸಾವಿನಿಂದ ಕಂಗಾಲಾದ ಯುವಕ ಅದೇ ನಾಯಿಯ ಚೈನ್ (ಸಂಕೋಲೆ) ಬಳಸಿ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾನೆ. ಈ ದಾರುಣ ಘಟನೆ ಮಾಹಿತಿ ಇಲ್ಲಿದೆ ನೋಡಿ.
9 ವರ್ಷಗಳ ಒಡನಾಡಿ ಈ ಬೌನ್ಸಿ!
ಈ ಹೃದಯವಿದ್ರಾವಕ ಘಟನೆ ನಡೆದಿರುವುದು ಬೆಂಗಳೂರು ಉತ್ತರ ತಾಲೂಕಿನ ಹೆಗ್ಗಡೆದೇವಪುರ ಗ್ರಾಮದಲ್ಲಿ. ಇಲ್ಲಿನ ನಿವಾಸಿ ರಾಜಶೇಖರ್ (33) ಕಳೆದ 9 ವರ್ಷಗಳಿಂದ ಜರ್ಮನ್ ಶಫರ್ಡ್ ಜಾತಿಗೆ ಸೇರಿದ್ದ 'ಬೌನ್ಸಿ' ಎನ್ನುವ ನಾಯಿಯನ್ನು ಅತ್ಯಂತ ಪ್ರೀತಿಯಿಂದ ಸಾಕಿದ್ದರು.
ಆದರೆ ಮಂಗಳವಾರ ಸಂಜೆ ಏಕಾಏಕಿ ಅನಾರೋಗ್ಯಕ್ಕೀಡಾದ 'ಬೌನ್ಸಿ' ಸಾವನ್ನಪ್ಪಿದೆ. ಇದಾದ ಬಳಿಕ ನಡೆದದ್ದು ಯಾರೂ ಊಹಿಸಿರದ ದುರಂತ.
ಅಂತ್ಯಸಂಸ್ಕಾರದ ಬಳಿಕ ಆತ್ಮಹತ್ಯೆ!
ಮಂಗಳವಾರ 'ಬೌನ್ಸಿ' ಸಾವನಪ್ಪಿದ್ದನ್ನು ಕಂಡು ರಾಜಶೇಖರ್ ಕಂಗಾಲಾಗಿದ್ದರು. ಅತೀವ ದುಃಖದಿಂದ ತಮ್ಮದೇ ಜಮೀನಿನಲ್ಲಿ ಬೌನ್ಸಿಯ ಅಂತ್ಯಸಂಸ್ಕಾರ ನೆರವೇರಿಸಿದ ರಾಜಶೇಖರ್ ಬುಧವಾರ ಬೆಳಗ್ಗೆ ಅದೇ ನಾಯಿಯ ಚೈನ್ (ಸಂಕೋಲೆ) ಬಳಸಿ ಮನೆಯೊಳಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಸದ್ಯ, ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಇಡೀ ಊರಿಗೆ ಊರೇ ರಾಜಶೇಖರ್ ಅವರ ಶ್ವಾನ ಪ್ರೀತಿಗೆ ಕಣ್ಣೀರ ಕೋಡಿ ಹರಿಸಿದೆ.