ದ.ಕ: ಕೇಂದ್ರ ಸರ್ಕಾರದಿಂದ ಅಶಕ್ತರಿಗೆ, ಅಸಹಾಯಕರಿಗೆ, ನಿರ್ಗತಿಕರಿಗೆ ಅದೆಷ್ಟೋ ರೀತಿಯ ಯೋಜನೆಗಳನ್ನು ಅನುಷ್ಠಾನಕ್ಕೆ ತರಲಾಗಿದೆ. ಆದರೆ ಹೆಚ್ಚಿನವರಿಗೆ ಇದರ ಬಗ್ಗೆ ಸೂಕ್ತವಾದ ಮಾಹಿತಿ ಇರುವುದಿಲ್ಲ. ಇದೀಗ ಕೇಂದ್ರ ಸರ್ಕಾರದಿಂದ ನೀಡುವ ಮತ್ತೊಂದು ಹೊಸ ಯೋಜನೆಯ ಬಗ್ಗೆ ದ.ಕ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು ಮಾಹಿತಿಯನ್ನು ನೀಡಿದ್ದಾರೆ.
ಮನೆಯ ಮೇಲ್ಛಾವಣಿಯಲ್ಲಿ ಸೋಲಾರ್ ಅಳವಡಿಸಿದ್ರೆ ಸಬ್ಸಿಡಿ- ಸಂಸದ ಚೌಟ...!
ದ.ಕ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ನಡೆದ ಪ್ರಧಾನಮಂತ್ರಿ ಸೂರ್ಯಘರ್ ಯೋಜನೆಯ ಕಾರ್ಯಾಗಾರದ ರೂಪುರೇಷೆಗಳ ಕುರಿತು ಸಭೆ ನಡೆಸಲಾಯಿತು. ಈ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ದ.ಕ ಸಂಸದ ಬ್ರಿಜೇಶ್ ಚೌಟ ಅವರು ಇನ್ಮುಂದೆ ಮನೆಯ ಮೇಲ್ಛಾವಣಿಯಲ್ಲಿ ಸೋಲಾರ್ ನ್ನು ಅಳವಡಿಸಿದ್ರೆ ಅಂತಹ ಮನೆಗೆ ಸಬ್ಸಿಡಿ ಭಾಗ್ಯವನ್ನು ನೀಡಲಾಗುವುದು.
ಈ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಿ ಅದರ ಫಲಾನುಭವಿಗಳಾಗುವಂತೆ ಮಾಡುವುದು ನಮ್ಮ ಕರ್ತವ್ಯ ಎಂದು ಹೇಳಿದರು. 1 ಕಿಲೋ ವ್ಯಾಟ್ ಗೆ 30000 ರೂ., 2 ಕಿಲೋ ವ್ಯಾಟ್ ಗೆ 60000 ರೂ, 3 ಕಿಲೋ ವ್ಯಾಟ್ ಮೇಲ್ಪಟ್ಟ ಸೋಲಾರ್ ಗಳಿಗೆ 78000 ರೂ.ದರವರೆಗೆ ಸಬ್ಸಿಡಿ ನೀಡಲಾಗುತ್ತದೆ. ಈ ಯೋಜನೆಯಿಂದ ಉತ್ಪತ್ತಿಯಾಗುವ ವಿದ್ಯುತ್ ನ್ನು ನಾವು ನೇರವಾಗಿ ಮನೆಯ ಬಳಕೆಗೆ ಬಳಸಬಹುದು ಎಂದು ಹೇಳಿದರು.
ಸಾರ್ವಜನಿಕರು ಆನ್ಲೈನ್ ಮುಖೇನ ಅರ್ಜಿ ಸಲ್ಲಿಸಬಹುದು..!
ದ.ಕ ಜಿಲ್ಲೆಯಲ್ಲಿ ಈಗಾಗಲೇ ಒಟ್ಟು 675 ಮಂದಿ ಸೋಲಾರ್ ಯೋಜನೆಯನ್ನು ಅಳವಡಿಸಿಕೊಂಡು ಈ ಯೋಜನೆಯ ಸದುಪಯೋಗ ಪಡೆದುಕೊಂಡಿದ್ದಾರೆ. ಪ್ರಧಾನಮಂತ್ರಿ ಸೂರ್ಯಘರ್ ಯೋಜನೆಯಡಿಯಲ್ಲಿ ಸೋಲಾರ್ ಉಪಕರಣಗಳನ್ನು ಮಾರಾಟ ಮಾಡಲು 270 ಡೀಲರ್ ಗಳನ್ನು ಗುರುತಿಸಲಾಗಿದೆ.
ಈ ಯೋಜನೆಯ ಫಲಾನುಭವಿಗಳಾಗಲು ಸಾರ್ವಜನಿಕರು ಈ ಯೋಜನೆಯ ಅಧಿಕೃತ ವೆಬ್‌ಸೈಟ್ ಮುಖೇನ ಆನ್ಲೈನ್ ನಲ್ಲೇ ಅರ್ಜಿಯನ್ನು ಸಲ್ಲಿಸಬಹುದು.