ದಮ್ಮಾನ್: ಸಾಮಾನ್ಯವಾಗಿ ಮುಸ್ಲಿಮರು ತಮ್ಮ ಪವಿತ್ರ ಧಾರ್ಮಿಕ ಕೇಂದ್ರವಾದ ಮೆಕ್ಕಾ, ಉಮ್ರಾ, ಮದೀನಾಕ್ಕೆ ಆಗಾಗ ಪ್ರವಾಸ ಹೋಗುತ್ತಿರುತ್ತಾರೆ. ಈ ಪ್ರವಾಸ ದೀರ್ಘ ಸಮಯ ಮತ್ತು ದೀರ್ಘ ಪ್ರಯಾಣ ಇರುವುದರಿಂದ ಹಲವು ದಿನಗಳು ಬೇಕಾಗುತ್ತದೆ. ಆದ್ದರಿಂದ ಯಾತ್ರಾರ್ಥಿಗಳು ಟ್ರಾವೆಲ್ ಏಜೆನ್ಸಿಯ ಮುಖೇನವಾಗಿ ಟಿಕೆಟ್ ಮಾಡಿ ವ್ಯವಸ್ಥೆ ಮಾಡಿಕೊಳ್ಳುತ್ತಾರೆ. ಆದರೆ ಇದೀಗ ಅದೇ ಟ್ರಾವೆಲ್ ಏಜೆನ್ಸಿಯಿಂದ ಯಾತ್ರಿಕರಿಗೆ ವಂಚನೆ ಆಗಿದೆ ಎಂಬ ಗಂಭೀರ ಆರೋಪವೊಂದು ಕೇಳಿಬರುತ್ತಿದೆ.
ಯಾತ್ರಾರ್ಥಿಗಳನ್ನು ಅರ್ಧದಲ್ಲೇ ಕೈ ಬಿಟ್ಟು ಎಸ್ಕೇಪ್ ಆದ ಟ್ರಾವೆಲ್ ಏಜೆನ್ಸಿ...!
ಉಮ್ರಾ ಯಾತ್ರೆಗೆಂದು ಹೇಳಿ ಮೆಕ್ಕಾ, ಮದೀನಾಕ್ಕೆ ಕರೆದೊಯ್ದು ಮುಹಮ್ಮದೀಯ ಹಜ್ ಆ್ಯಂಡ್ ಉಮ್ರಾ ಟ್ರಾವೆಲ್ಸ್ ನ ಮಾಲಕರು ಯಾತ್ರಿಕರನ್ನು ಅರ್ಧ ದಾರಿಯಲ್ಲೇ ಕೈ ಬಿಟ್ಟು ಎಸ್ಕೇಪ್ ಆದ ಘಟನೆ ನಡೆದಿದ್ದು ಯಾತ್ರಾರ್ಥಿಗಳು ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ಈ ಏಜೆನ್ಸಿಯಿಂದ ಮೋಸ ಹೋದ ಸುಮಾರು 157ಕ್ಕೂ ಅಧಿಕ ಮಂದಿ ಇದೀಗ ದಮ್ಮಾನ್ ನಲ್ಲಿ ಸಿಲುಕಿಕೊಂಡು ಪರದಾಡುತ್ತಿದ್ದಾರೆ.
ಏನಿದು ಘಟನೆ..?
ಅಶ್ರಫ್ ಸಖಾಪಿ ಪರ್ಪುಂಜ ಎಂಬಾತ ಮುಹಮ್ಮದೀಯ ಹಜ್ ಆ್ಯಂಡ್ ಉಮ್ರಾ ಟ್ರಾವೆಲ್ಸ್ ಏಜಿನ್ಸಿಯನ್ನು ನಡೆಸುತ್ತಿದ್ದು ಅತೀ ಕಡಿಮೆ ದರಕ್ಕೆ ಉಮ್ರಾ ಯಾತ್ರೆ ವ್ಯವಸ್ಥೆ ಮಾಡಿಕೊಡುವುದಾಗಿ ಹೇಳಿ ಜನರನ್ನು ನಂಬಿಸಿ ದ.ಕ, ಕೊಡಗು, ಹಾಸನ ಸೇರಿದಂತೆ 160 ಮಂದಿಯನ್ನು ಡಿ. 14ಕ್ಕೆ ಮೆಕ್ಕಾಕ್ಕೆ ಕರೆದುಕೊಂಡು ಹೋಗಿದ್ದಾರೆ. ಆದರೆ ಮೆಕ್ಕಾದಲ್ಲೇ ಧಾರ್ಮಿಕ ವಿಧಿಗಳನ್ನು ಪೂರೈಸಿ ಬಳಿಕ ಯಾತ್ರಾರ್ಥಿಗಳನ್ನು ಅರ್ಧದಲ್ಲೇ ಬಿಟ್ಟು ಎಸ್ಕೇಪ್ ಆಗಿದ್ದಾನೆ.
ಯಾತ್ರಾರ್ಥಿಗಳು ಈ ಬಗ್ಗೆ ಅಳಲು ತೋಡಿಕೊಂಡದ್ದು ಹೀಗೆ...!
ಅಶ್ರಫ್ ನ ಮೋಸದ ಜಾಲೆಗೆ ಬಿದ್ದು ಸಂಕಷ್ಟಕ್ಕೆ ಸಿಲುಕಿದ ಯಾತ್ರಾರ್ಥಿ ಒಬ್ಬರು ಈ ಬಗ್ಗೆ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ಸಾಮಾನ್ಯವಾಗಿ ಉಮ್ರಾ ಯಾತ್ರೆಗೆ ಹೋಗಲು 80ರಿಂದ 85ಸಾವಿರದವರೆಗೆ ಬೇಕೇ ಬೇಕು. ಕಡಿಮೆ ಪ್ಯಾಕೇಜ್ ನಲ್ಲಿ ಅಶ್ರಫ್ ಸಖಾಪಿ ಪರ್ಪುಂಜ ಅವರು ವ್ಯವಸ್ಥೆ ಮಾಡುತ್ತೇವೆ ಎಂದಾಗ ನಮಗೂ ಅನುಕೂಲವಾಗುತ್ತದೆ ಎಂದು ಅದನ್ನು ಒಪ್ಪಿಕೊಂಡೆವು. ಆದರೆ ಅಲ್ಲಿಗೆ ತಲುಪಿ ವಿಧಿವಿಧಾನಗಳನ್ನು ಮುಗಿಸಿ ಊರಿಗೆ ವಾಪಸ್ಸಾಗಬೇಕು ಎನ್ನುವಷ್ಟರಲ್ಲಿ ಈತ ಎಸ್ಕೇಪ್ ಆಗಿದ್ದಾನೆ. ಇದೀಗ ಇಕ್ಕಟ್ಟಿನಲ್ಲಿ ಪರದಾಡುವಂತಾಗಿದೆ. ಊರಿಗೆ ಹೋಗಲು, ಆಹಾರ ಸೇವಿಸಲು ಕೂಡಾ ನಮ್ಮಲ್ಲಿ ಹಣವಿಲ್ಲ. ವೃದ್ಧರು, ಮಹಿಳೆಯರು, ಗರ್ಭಿಣಿಯರು ಕೂಡಾ ಇದರಿಂದ ತೊಂದರೆ ಅನುಭವಿಸುತ್ತಿದ್ದಾರೆ ಎಂದು ತಮ್ಮ ಬೇಗುದಿ ವ್ಯಕ್ತಪಡಿಸಿದ್ದಾರೆ.
ದಮ್ಮಾನ್ ನಲ್ಲೇ ಬಾಕಿ ಉಳಿದವರಿಗೆ ಸೂಕ್ತ ವ್ಯವಸ್ಥೆ..!
ಇನ್ನು ಯಾತ್ರಾರ್ಥಿಗಳಲ್ಲಿ ಮೂವರಿಗೆ ಬುಧವಾರ ಊರಿಗೆ ಮರಳಲು ಅವಕಾಶ ಲಭಿಸಿದ್ದು ಬುಧವಾರ ರಾತ್ರಿ ಹವಾಮಾನ ಏರುಪೇರಿನಿಂದಾಗಿ ವಿಮಾನ ಹಾರಾಟ ನಡೆಸಲು ಸಾಧ್ಯವಾಗಿಲ್ಲ. ಹಾಗಾಗಿ ಬಾಕಿಯುಳಿದವರನ್ನು ಇಂದು ತವರೂರು ತಲುಪಿಸುವ ಪ್ರಯತ್ನ ನಡೆಯುತ್ತಿದೆ ಎಂಬ ಮಾಹಿತಿ ಮೂಲಗಳಿಂದ ಲಭ್ಯವಾಗಿದೆ.