ವಿಟ್ಲ: ಇತ್ತೀಚಿನ ದಿನಗಳಲ್ಲಿ ಪ್ರತಿದಿನ ಅಪಘಾತ ಪ್ರಕರಣಗಳು ನಡೆಯುತ್ತಲೇ ಇರುತ್ತದೆ. ಯುವ ತರುಣರು ದುರಂತ ಅಪಘಾತ ಪ್ರಕರಣದಲ್ಲಿ ಸಾವಿಗೀಡಾಗುತ್ತಿರೋದು ವಿಷಾದನೀಯ. ಈ ಎಲ್ಲದರ ಮಧ್ಯೆ ಸರ್ಕಾರಿ ಬಸ್ ಒಂದು ಸಂಚರಿಸುತ್ತಿದ್ದಾಗ ಪ್ರಯಾಣಿಕರನ್ನು ದಿಢೀರ್ ಭಯಭೀತಗೊಳಿಸಿದೆ.
ಸರ್ಕಾರಿ ಬಸ್ ನಲ್ಲಿ ಕಳಚಿ ಬಿದ್ದ ಡೀಸೆಲ್ ಟ್ಯಾಂಕ್.!!
ವಿಟ್ಲದ ಮಾಣಿ ಸಮೀಪದ ಮಹಾವೀರ ಎಂಬಲ್ಲಿ ಮಂಗಳೂರು-ಬೆಂಗಳೂರು ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದಾಗಲೇ ಕೆಎಸ್‌ಆರ್ ಟಿಸಿ ಬಸ್ಸಿನ ಡೀಸೆಲ್ ಟ್ಯಾಂಕ್ ಕಳಚಿ ಬಿದ್ದ ಘಟನೆ ಇಂದು ನಡೆದಿದೆ. ಬಸ್ಸೊಂದು ಮಂಗಳೂರಿನಿಂದ ಅರಸೀಕೆರೆಗೆ ಹೋಗುತ್ತಿದ್ದ ಸಂದರ್ಭ ಬಸ್ ನಿಂದ ಡಿಸೇಲ್ ಟ್ಯಾಂಕ್ ಹೆದ್ದಾರಿಗೆ ಕಳಚಿ ಬಿದ್ದಿದ್ದು, ತತ್ ಕ್ಷಣ ಬಸ್ ಸಂಚಾರ ಸ್ಥಗಿತಗೊಂಡಿದೆ.
ಪ್ರಯಾಣಿಕರು ಒಂದು ಸಲ ಗಾಬರಿಗೊಂಡಿದ್ದಾರೆ. ಈ ನಡುವೆ ಪ್ರಯಾಣಿಕರಿಗೆ ತೊಂದರೆಯಾಗದಂತೆ ಬದಲಿ ಬಸ್ಸಿನ ಮೂಲಕ ಸಂಚರಿಸಲು ವ್ಯವಸ್ಥೆ ಮಾಡಿಕೊಡಲಾಯಿತು. ಹೆದ್ದಾರಿ ಅವ್ಯವಸ್ಥೆಯಿಂದಾಗಿ, ಕಾಮಗಾರಿ ದುರ್ವ್ಯವಸ್ಥೆಯಿಂದಾಗಿ ಈ ಘಟನೆ ಸಂಭವಿಸಿದೆ ಎಂದು ಸಾರ್ವಜನಿಕರು ದೂರಿದ್ದಾರೆ.
ಸರ್ಕಾರಿ ಬಸ್ಸಿನ ವೈಫಲ್ಯಕ್ಕೆ ಆಕ್ರೋಶ ವ್ಯಕ್ತಪಡಿಸಿದ ಸಾರ್ವಜನಿಕರು...!
ಚಲಿಸುತ್ತಿದ್ದಾಗಲೇ ಸರ್ಕಾರಿ ಬಸ್ ನ ಡೀಸೆಲ್ ಟ್ಯಾಂಕ್ ಕಳಚಿ ಬಿದ್ದದ್ದು ಪ್ರಯಾಣಿಕರ ಭಯ ಮತ್ತು ಆಕ್ರೋಶಕ್ಕೆ ಕಾರಣವಾಗಿದೆ. ಸರ್ಕಾರಿ ಬಸ್ ನಲ್ಲಿ ಸಾರ್ವಜನಿಕರು ಅನೇಕ ಸಂಖ್ಯೆಯಲ್ಲಿ ಪ್ರಯಾಣ ಮಾಡುವುದರಿಂದ ಅದರ ಸ್ಥಿತಿಗತಿಯನ್ನು ಪರಿಶೀಲಿಸಿ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸುವುದು ಸರ್ಕಾರಿ ಬಸ್ ನ ಸಿಬ್ಬಂದಿಯ ಜವಾಬ್ದಾರಿಯಾಗಿದೆ.
ಆದರೆ ಅದನ್ನು ಸರಿಯಾಗಿ ಪಾಲಿಸದೆ ಇಂತಹ ಘಟನೆ ನಡೆದಿದೆ. ಅಲ್ಲದೆ ಹೆದ್ದಾರಿಯ ಕಾಮಗಾರಿ ವೈಫಲ್ಯ ಕೂಡಾ ಇದಕ್ಕೆ ಮತ್ತೊಂದು ಕಾರಣವಾಗಿದೆ. ಇದಕ್ಕೆ ಆದಷ್ಟು ಶೀಘ್ರವಾಗಿ ಸೂಕ್ತ ವ್ಯವಸ್ಥೆ ಕಲ್ಪಿಸಬೇಕು ಎಂದು ಆ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಸಾರ್ವಜನಿಕರು ಆಗ್ರಹಿಸಿದ್ದಾರೆ.