ಚಾಮರಾಜನಗರ: ಎಲ್ಲಾ ಅಣ್ಣ-ತಂಗಿಯರು 'ಅಣ್ಣಾತಂಗಿ' ಸಿನಿಮಾ ರೀತಿಯೇ ಇರುತ್ತಾರೆ ಎನ್ನುವುದು ಸುಳ್ಳು ಎಂದು ಮತ್ತೊಮ್ಮೆ ಸಾಬೀತಾಗಿದೆ. ಮಗುವನ್ನು ಮಲಗಿಸುವ ವಿಚಾರದಲ್ಲಿ ಗಲಾಟೆ ನಡೆದು, ಗಲಾಟೆ ತಾರಕಕ್ಕೇರಿ ಅಂತಿಮವಾಗಿ ಅಣ್ಣ ತನ್ನ ಸ್ವಂತ ತಂಗಿಯನ್ನು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ ಭೀಕರ ಘಟನೆ ಇದೀಗ ವರದಿಯಾಗಿದ್ದು, ಈ ಬಗೆಗಿನ ಡೀಟಿಯಲ್ಸ್ ಇಲ್ಲಿದೆ.
ತಂಗಿಯನ್ನೇ ಕೊಂದ ಫರ್ಮಾನ್!
ಘಟನೆ ನಡೆದಿರುವುದು ಚಾಮರಾಜ ನಗರದ ಕೊಳ್ಳೆಗಾಲದಲ್ಲಿ. ಇಲ್ಲಿನ ಈದ್ಯಾ ಮೊಹಲ್ಲಾ ಬಡಾವಣೆ ನಿವಾಸಿ ಫರ್ಮಾನ್(30) ಎಂಬಾತ ತನ್ನ ಸ್ವಂತ ತಂಗಿ ಐಮಾನ್ ಭಾನು(23)ಳನ್ನು ಕ್ಷುಲ್ಲಕ ಕಾರಣಕ್ಕೆ ಭೀಕರವಾಗಿ ಕೊಲೆ ಮಾಡಿದ್ದಾನೆ.ಈ ನರರೂಪಿ ರಾಕ್ಷಸ ಫರ್ಮಾನ್ ತಂಗಿಯನ್ನು ಕೊಂದಿದ್ದು ಮಾತ್ರವಲ್ಲದೇ ಹಲ್ಲೆ ತಪ್ಪಿಸಲು ಬಂದ ಅತ್ತಿಗೆ ಹಾಗೂ ತಂದೆಗೂ ಚೂರಿಯಿಂದ ಇರಿದಿದ್ದಾನೆ ಎಂದು ವರದಿಯಾಗಿದೆ.
ಏಕಾಏಕಿ ರಾಕ್ಷಸನಾದ ಫರ್ಮಾನ್!
ಬುಧವಾರ ರಾತ್ರಿ ಮನೆಯಲ್ಲಿ ಊಟ ಮಾಡುತ್ತಿದ್ದ ವೇಳೆ ಅಣ್ಣನ ಮಗು ಫರ್ಮಾನ್ ಬಳಿಯಲ್ಲಿತ್ತು. ತುಸು ಜ್ವರದಿಂದ ಬಳಲುತ್ತಿದ್ದ ಮಗುವಿಗೆ ಫರ್ಮಾನ್ ಸೌತೆಕಾಯಿ ತಿನ್ನಿಸಲು ಮುಂದಾಗಿದ್ದ, ಈ ವೇಳೆ ,'ಅಣ್ಣಾ ಮಗುವುಗೆ ಜ್ವರವಿದೆ ಸೌತೆಕಾಯಿ ತಿನ್ನಿಸಬೇಡ, ಮಗು ಮಲಗಲಿ' ಎಂದು ಐಮಾನ್ ಭಾನು ಹೇಳಿದ್ದಾಳೆ. ಇಷ್ಟಕ್ಕೆ ಕೆರಳಿ ಕೆಂಡವಾದ ಫರ್ಮಾನ್ ಅಡುಗೆ ಮನೆಯುಂದ ಚಾಕು ತಂದು ತಂಗಿಯ ಕುತ್ತಿಗೆ ಕೊಯ್ದಿದ್ದಾನೆ. ಹಲ್ಲೆ ತಪ್ಪಿಸಲು ಬಂದ ಮನೆಯವರೆಲ್ಲರ ಮೇಲೂ ಚಾಕುವಿನಿಂದ ದಾಳಿ ನಡೆಸಿದ್ದಾನೆ.
ಗಲಾಟೆ ಕೇಳಿ ಪಕ್ಕದ ಮನೆಯವರು ಓಡಿ ಬಂದಾಗ ಐಮಾನ್ ಭಾನು ರಕ್ತದ ಮಡುವಿನಲ್ಲಿ ಬಿದ್ದುದ್ದಳು. ಆರೋಪಿಯನ್ನು ಕೊಠಡಿಯಲ್ಲಿ ಕೂಡಿ ಹಾಕಿ ಗಾಯಾಳುಗಳನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಆಸ್ಪತ್ರೆಗೆ ತಲುಪುವ ವೇಳೆಗಾಗಲೇ ಐಮಾನ್ ಬಾನು ಉಸಿರು ಚೆಲ್ಲಿದ್ದಾಳೆ. ಸದ್ಯ, ಆರೋಪಿ ಫರ್ಮಾನ್ ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದು ಬಂದಿದೆ.