ಪುತ್ತೂರು:ಪ್ರಾಣಿಗಳು ಅಂದ್ರೆ ಕೆಲವರಿಗೆ ಅತ್ಯಂತ ಅಚ್ವುಮೆಚ್ಚಾಗಿರುತ್ತದೆ. ಅವರು ಮನೆಯಲ್ಲಿ ಸಾಕುವ ಪ್ರಾಣಿಗಳನ್ನಂತೂ ಮನೆ ಮಕ್ಕಳಂತೆ ಸಾಕಿ ಸಲಹುತ್ತಾರೆ. ಅದಕ್ಕಾಗಿ ದುಬಾರಿ ಬೆಲೆಯಲ್ಲಿ ಖರ್ಚು ಮಾಡುತ್ತಾರೆ. ಪ್ರಾಣಿಗಳ ಮೂಕ ಮಾತನ್ನು ಅರ್ಥೈಸಿಕೊಂಡು ಅವುಗಳಿಗೆ ಯಾವುದೇ ಕುಂದು ಕೊರತೆಗಳು ಎದುರಾಗದಂತೆ ನೋಡಿಕೊಳ್ಳುತ್ತಾರೆ. ಒಟ್ಟಾರೆಯಾಗಿ ಅದನ್ನು ಜೀವಕ್ಕಿಂತಲೂ ಹೆಚ್ಚಾಗಿ ಪ್ರೀತಿಸಿ ಅತೀವವಾಗಿ ಹಚ್ಚಿಕೊಂಡಿರುತ್ತಾರೆ. ಹೀಗಿರುವಾಗ ಒಂದೇ ಸಮನೆ ಆ ಪ್ರಾಣಿಗಳು ಕಣ್ಮರೆಯಾದರೆ ಹೇಗೆ ಹೇಳಿ. ಅಂತಹುದೇ ಒಂದು ಘಟನೆ ಪುತ್ತೂರಿನಲ್ಲಿ ನಡೆದಿದೆ. ಅಷ್ಟೇ ಅಲ್ಲ ಕಾಣೆಯಾದ ಪ್ರಾಣಿಯನ್ನು ಹುಡುಕಿಕೊಡುವಂತೆ ರಚಿಸಿದ ಪೋಸ್ಟರ್ ಇದೀಗ ಎಲ್ಲೆಡೆ ವೈರಲ್ ಆಗ್ತಾ ಇದೆ.
ಬೆಕ್ಕು ಹುಡುಕಿಕೊಟ್ಟವರಿಗೆ 15000 ರೂ. ನಗದು ಬಹುಮಾನ...!!
ಪುತ್ತೂರು ಬೈಪಾಸ್ ರಸ್ತೆಯ ಅಸ್ಮಿ ಬಾರ್ & ರೆಸ್ಟೋರೆಂಟ್ ಸಮೀಪವಿರುವ ಪುನರ್ಪುಳಿ ಜ್ಯೂಸನ್ನು ಮಾರಾಟ ಮಾಡುವ ವ್ಯಕ್ತಿ ತಮ್ಮ ಮನೆಯಲ್ಲಿ ಮುದ್ದಿನ ಬೆಕ್ಕನ್ನು ಸಾಕಿದ್ದರು. ಆದರೆ ಅದೀಗ ಕಾಣೆಯಾಗಿರುವುದರಿಂದ ಹುಡುಕಿಕೊಟ್ಟವರಿಗೆ 15000 ನಗದು ಬಹುಮಾನ ನೀಡುವುದಾಗಿ ಇವರು ಘೋಷಣೆ ಮಾಡಿದ್ದಾರೆ. ಅಷ್ಟೇ ಅಲ್ಲದೆ ಅದಕ್ಕೆ ಸಂಬಂಧಿಸಿ ರೆಡಿ ಮಾಡಿದ ಪೋಸ್ಟರ್ ನ್ನು ಎಲ್ಲೆಡೆ ಹಂಚುತ್ತಿದ್ದಾರೆ.
ತನ್ನಲ್ಲಿಗೆ ಜ್ಯೂಸ್ ಕುಡಿಯಲು ಬರುವ ಗ್ರಾಹಕರಿಗೂ ಈ ಪೋಸ್ಟರ್ ನೀಡಿ ಕಣ್ಣೀರಿಡುತ್ತಿದ್ದಾರೆ. ಪ್ರಾಣಿಗಳ ಮೇಲೆ ಹೀಗೂ ಪ್ರೀತಿ ಇರಲು ಸಾಧ್ಯನಾ ಎಂದು ಅಲ್ಲಿಯ ಸ್ಥಳೀಯರೇ ಇವರ ಮುಗ್ಧತೆಯ ಮಮಕಾರಕ್ಕೆ ಅಚ್ಚರಿ ವ್ಯಕ್ತಪಡಿಸಿದ್ದಾರೆ.
ಬೆಕ್ಕು ಸಿಕ್ಕಿದವರು ಈ ನಂಬರ್ ಗೆ ಕರೆ ಮಾಡಿ...!
ಪಂಚವಟಿ ರಸ್ತೆ ಬಪ್ಪಳಿಗೆಯಲ್ಲಿರುವ ಇವರ ಮನೆಯಿಂದ ಮುದ್ದಿನ ಬೆಕ್ಕು ದಿಢೀರ್ ನಾಪತ್ತೆಯಾಗಿದೆ. ಬೆಕ್ಕು ಕಂಡವರು 9591006341 ಈ ನಂಬರ್ ಗೆ ಕರೆ ಮಾಡಿ ತಿಳಿಸುವಂತೆ ಪೋಸ್ಟರ್ ನಲ್ಲಿ ಮನವಿ ಮಾಡಿದ್ದಾರೆ. ಅಂದಾಜು 200ಕ್ಕೂ ಮಿಕ್ಕಿ ಇವರು ಪೋಸ್ಟರ್ ಹಂಚುತ್ತಿದ್ದು ಇವರು ಪಡುತ್ತಿರುವ ಸಂಕಷ್ಟ ನೋಡಿ ಆದಷ್ಟು ಬೇಗ ಕಾಣೆಯಾದ ಬೆಕ್ಕು ಸಿಗಲಿ ಎಂದು ಸ್ಥಳೀಯರು, ಅವರ ಗ್ರಾಹಕರು ಆಶಯ ವ್ಯಕ್ತಪಡಿಸಿದ್ದಾರೆ.