ರಾಜಸ್ಥಾನ: ಪ್ರಪಂಚದಲ್ಲಿ ತಾಯಿಗಿಂತ ಮೊದಲು ದೇವರಿಲ್ಲ ಅನ್ನೋ ಮಾತು ಅಕ್ಷರಶಃ ಸತ್ಯ. ತಾಯಿಯ ಪ್ರೀತಿಗಿಂತ ಮಿಗಿಲಾದದ್ದು ಪ್ರಪಂಚದಲ್ಲಿ ಏನೂ ಇಲ್ಲ ಅಂತಾರೆ. ಆಕೆ ತ್ಯಾಗಮಯಿ. ತನ್ನ ಸರ್ವಸ್ವವನ್ನೂ ಧಾರೆಯೆರೆದು ಮಕ್ಕಳಿಗಾಗಿ ಎಲ್ಲಾ ತ್ಯಾಗಕ್ಕೂ ಆಕೆ ಸಿದ್ಧಳಿರುತ್ತಾಳೆ.
ಅಂತಹ ದೇವರ ಸ್ವರೂಪವಾದ ತಾಯಿ ಮಕ್ಕಳ ಪಾಲಿಗೆ ಯಮಳಾದರೆ ಹೇಗೆ...? ಅಂತಹ ಮನಕಲಕುವ ಘಟನೆಯೊಂದು ನಡೆದಿದೆ.
ಮುದ್ದಾದ ಅವಳಿ ಮಕ್ಕಳಿಗೆ ಮದ್ದು ನೀಡಿ ಸಾಯಿಸಿದ ಮಹಾತಾಯಿ..!
ಹೌದು. ರಾಜಸ್ಥಾನದ ಸಿರೋಹಿ ಜಿಲ್ಲೆಯಲ್ಲಿ ಮುದ್ದಾದ ಅವಳಿ ಮಕ್ಕಳನ್ನು ಕೊಂದು ತಾಯಿಯೋರ್ವಳು ಅವಳೂ ಜೀವಾಂತ್ಯಗೊಳಿಸಿದ ಪೈಶಾಚಿಕ ಕೃತ್ಯವೊಂದು ಬೆಳಕಿಗೆ ಬಂದಿದೆ. ಶಿವಗಂಜ್ ಪ್ರದೇಶದಲ್ಲಿ ಪಾಪಿ ತಾಯಿ ರೇಖಾ ವಾಸವಾಗಿದ್ದಳು.
ಕಳೆದ ವರ್ಷ ಈಕೆ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಳು. ಆದರೆ ಅವಳಿಗೆ ಅವಳಿ ಮಕ್ಕಳೆಂದರೆ ಚೂರೂ ಇಷ್ಟವಿರಲಿಲ್ಲ. ಅದಕ್ಕೆ ಹಾಲಲ್ಲಿ ವಿಷ ಬೆರೆಸಿ ಮಕ್ಕಳನ್ನು ದಾರುಣವಾಗಿ ಸಾಯಿಸಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಶಿವಗಂಜ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಾಕಲು ತೊಂದರೆಯಾಗ್ತಿತ್ತು, ಅದಕ್ಕೆ ಹೀಗೆ ಮಾಡಿದೆ- ಆರೋಪಿ ರೇಖಾ
ಈಕೆ ಅವಳ ತಾಯಿ ಮನೆಯಲ್ಲಿ ವಾಸವಾಗಿದ್ದಳು. ಮನೆಯಲ್ಲಿ ಅವರು ಇಲ್ಲದಿದ್ದಾಗ ಈ ಖತರ್ನಾಕ್ ಪ್ಲ್ತಾನ್ ರೂಪಿಸಿದ್ದಾಳೆ. ಇವಳ ಗಂಡ ಮಹಾರಾಷ್ಟ್ರದಲ್ಲಿ ಟೈಲರ್ ವೃತ್ತಿ ಮಾಡುತ್ತಿದ್ದಾರೆ.
ಇಬ್ಬರು ಮಕ್ಕಳಿಗೆ ಪೂರ್ವಾಂಶ್ ಮತ್ತು ಪೂರ್ವಿತ್ ಎಂದು ಹೆಸರಿಟ್ಟಿದ್ದರು. ಆಕೆಯ ತಾಯಿ ಮನೆಗೆ ಮರಳುವಷ್ಟರಲ್ಲಿ ಮಕ್ಕಳಿಗೆ ವಿಷ ಕೊಟ್ಟು ತಾನೂ ಕುಡಿದು ಪ್ರಜ್ಞಾಹೀನ ಸ್ಥಿತಿಯಲ್ಲಿ ಮಲಗಿದ್ದರು. ನೋಡಿ ಕಂಗಾಲಾದ ತಾಯಿ ಮೂವರನ್ನೂ ಆಸ್ಪತ್ರೆಗೆ ಸಾಗಿಸಿದ್ದಾಳೆ.
ಆದರೆ ಇಬ್ಬರು ಮಕ್ಕಳು ಆಗಲೇ ಉಸಿರು ಚೆಲ್ಲಿದ್ದು ಆರೋಪಿ ರೇಖಾಳಿಗೆ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಈ ಸಂದರ್ಭ ಪೊಲೀಸರು ಅವಳಿಂದ ಹೇಳಿಕೆಯನ್ನು ಪಡೆದುಕೊಂಡಿದ್ದಾರೆ. ಆಗ ` ನನಗೆ ಇಬ್ಬರು ಮಕ್ಕಳನ್ನು ಸಾಕಲು ತುಂಬಾ ಸಮಸ್ಯೆಯಾಗುತ್ತಿತ್ತು.
ಅದಕ್ಕೆ ಈ ತಪ್ಪು ನಿರ್ಧಾರ ತೆಗೆದುಕೊಂಡೆ' ಎಂದು ಹೇಳಿದ್ದಾಳೆ. ಕೊನೆಗೆ ಆಕೆಯೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾಳೆ. ಪತ್ನಿ, ಮಕ್ಕಳನ್ನು ಕಳೆದುಕೊಂಡ ಯೋಗಿಶ್ ಮಾತ್ರ ಕಂಗಾಲಾಗಿದ್ದಾನೆ.