ಉಡುಪಿ| ಹೃದ್ರೋಗ ಸಮಸ್ಯೆಯಿಂದ ಬಳಲುತ್ತಿದ್ದ ಕೂಸಿನ ಪಾಲಿಗೆ ದೇವರಾದ ಈಶ್ವರ್ ಮಲ್ಪೆ..! ಝೀರೋ ಟ್ರಾಫಿಕ್ ನಲ್ಲಿ ಮಗು ಬೆಂಗ್ಳೂರಿಗೆ...!!

  • 04 Jan 2025 03:37:21 PM

ಉಡುಪಿ: ಈಗಿನ ಕಾಲದಲ್ಲಿ ಸ್ವಚ್ಛ ಮನಸ್ಸಿನಿಂದ, ನಿಸ್ವಾರ್ಥವಾಗಿ ಸಮಾಜಸೇವೆಗೈಯ್ಯುವ ಕೈಗಳಿರುವುದು ಅತೀ ವಿರಳ. ಅಂತದ್ರಲ್ಲಿ ತನ್ನ ಮಕ್ಕಳು ಅಂಗವಿಕಲರಾಗಿದ್ರೂ ಸದಾ ಬೇರೆಯವರ ಸಹಾಯಕ್ಕೆ ನಿಲ್ಲುವ, ತನ್ನ ಪ್ರಾಣವನ್ನೂ ಲೆಕ್ಕಿಸದೆ ಪರರ ಜೀವ ಉಳಿಸಲು ಹಾತೊರೆಯುವ, ಸಮಾಜಕ್ಕೆ ಮಾದರಿಯಾಗಿ ನಿಲ್ಲುವ ಆದರ್ಶ ವ್ಯಕ್ತ ಎಂದರೆ ಅದು ಈಶ್ವರ್ ಮಲ್ಪೆ ಅವರು.

 

ಅದೆಷ್ಟೋ ಸನ್ಮಾನಗಳನ್ನು ಸ್ವೀಕರಿಸಿದರೂ ಎಳ್ಳಷ್ಟೂ ಅಹಂ ಇರದ ಇವರು ಅನೇಕರ ಪಾಲಿಗೆ ದೇವರಾದವರು. ಇದೀಗ ಮತ್ತೊಂದು ಸತ್ಕಾರ್ಯ ಮಾಡುವುದರ ಮುಖೇನ ಸುದ್ದಿಯಾಗಿದ್ದಾರೆ. 

 

ಮಗುವಿಗೆ ಹಾರ್ಟ್ ಪ್ರಾಬ್ಲಮ್, ಚಿಕಿತ್ಸೆಗಾಗಿ ಬೆಂಗಳೂರಿಗೆ ಕರೆದೊಯ್ದ ಈಶ್ವರ್ ಮಲ್ಪೆ..!!

 

ಹೃದ್ರೋಗ ಸಮಸ್ಯೆಯಿಂದ ಬಳಲುತ್ತಿದ್ದ 6 ತಿಂಗಳ ಮಗುವನ್ನು ಸಮಾಜಸೇವಕ ಈಶ್ವರ ಮಲ್ಪೆ ಅವರು ತನ್ನದೇ ಆ್ಯಂಬುಲೆನ್ಸ್‌ನಲ್ಲಿ ಮಣಿಪಾಲದ ಕೆಎಂಸಿ ಆಸ್ಪತ್ರೆಯಿಂದ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಜಯದೇವ ಆಸ್ಪತ್ರೆಗೆ ಝೀರೋ ಟ್ರಾಫಿಕ್‌ನಲ್ಲಿ ಕರೆದುಕೊಂಡು ಹೋಗಿದ್ದಾರೆ.

 

ದಾರಿ ಮಧ್ಯೆ ಅನೇಕರು ಸಂಚಾರಕ್ಕೆ ಅವಕಾಶ ಮಾಡಿಕೊಟ್ಟು ಸಹಕರಿಸಿದ್ದಾರೆ. ಮಣಿಪಾಲದ ಆಸ್ಪತ್ರೆಯಿಂದ ಮಗುವನ್ನು ಹಿರಿಯಡಕ, ಕಾರ್ಕಳ, ಬಜಗೋಳಿ, ಗುರುವಾಯನಕೆರೆ, ಬೆಳ್ತಂಗಡಿ, ಉಜಿರೆ, ಚಾರ್ಮಾಡಿ, ಮೂಡಿಗೆರೆ, ಬೇಳೂರು, ಹಾಸನ, ಚನ್ನರಾಯಪಟ್ಟಣ, ಬೇಳೂರು ಕ್ರಾಸ್‌, ನೆಲಮಂಗಲದ ರಸ್ತೆಯ ಮೂಲಕ ಯಾವುದೇ ತೊಂದರೆಯಿಲ್ಲದೆ ಜಯದೇವ ಆಸ್ಪತ್ರೆಗೆ ತಲುಪಿಸಲಾಯಿತು. ಇದೀಗ ಮಗುವಿಗೆ ಸೂಕ್ತ ಚಿಕಿತ್ಸೆ ಮುಂದುವರೆಯುತ್ತಿದೆ. 

 

ಈ ಬಗ್ಗೆ ಈಶ್ವರ್ ಮಲ್ಪೆ ಅವರು ಹೇಳೋದೇನು..?

 

ಈ ಮಗುವಿಗಾಗಿ ನಾನು ಯಾವುದೇ ರೀತಿಯಲ್ಲಿ ಹಣವನ್ನು ಪಡೆದುಕೊಳ್ಳದೆ ಉಚಿತವಾಗಿಯೇ ಆ್ಯಂಬುಲೆನ್ಸ್ ಸೇವೆಯನ್ನು ನೀಡಿದ್ದೇನೆ. ನಮಗೆ ಪ್ರಯಾಣದಲ್ಲಿ ದಾರಿ ಮಧ್ಯೆ ಅನೇಕ ಸಾರ್ವಜನಿಕರು, ಪೊಲೀಸ್ ಇಲಾಖೆ ಉತ್ತಮವಾಗಿ ಸ್ಪಂದಿಸಿ ಸಹಕರಿಸಿದ್ದಾರೆ. ಇದಕ್ಕಾಗಿ ಕೃತಜ್ಞತೆಗಳು.

 

ಈಗಾಗಲೇ ಮಗುವಿಗೆ ಚಿಕಿತ್ಸೆ ಮುಂದುವರೆದಿದೆ. ಆದಷ್ಟು ಶೀಘ್ರವಾಗಿ ಮಗು ಚೇತರಿಸಿಕೊಳ್ಳಲಿ ಎಂದು ಹಾರೈಸುತ್ತೇನೆ' ಎಂದು ಹೇಳಿದ್ದಾರೆ.