ಮೂಲ್ಕಿ: ಸಾರ್ವಜನಿಕರನ್ನು ಭೇಟಿಯಾದ ಸಂಸದ. ಕ್ಯಾ ಚೌಟ; ಅಹವಾಲು ಸ್ವೀಕಾರ

  • 05 Jan 2025 11:54:15 PM

ಮಂಗಳೂರು: ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ಇಂದು ಮೂಲ್ಕಿಗೆ ಭೇಟಿ ನೀಡಿದ ವೇಳೆಯಲ್ಲಿ ಅವರು ಅಲ್ಲಿನ ಸ್ಥಳೀಯ ನಾಗರಿಕರ ಕುಂದುಕೊರತೆಗಳ ಮತ್ತು ಎದುರಿಸುತ್ತಿರುವ ತೊಂದರೆಗಳ ಕುರಿತು ತಿಳಿದು ಕೊಂಡಿದ್ದಾರೆ.

 

ಇಂದು ಬೆಳಗ್ಗೆ ಕ್ಯಾ . ಚೌಟ ಅವರು ಮೂಲ್ಕಿಯ “ಹೊಟೇಲ್ ಪುನರೂರು”ನಲ್ಲಿ ಸಾರ್ವಜನಿಕರ ಭೇಟಿ ಮಾಡಿದ್ದಾರೆ. ಈ ಸಂದರ್ಭದಲ್ಲಿ ಈ ಭಾಗದ ಸ್ಥಳೀಯ ನಿವಾಸಿಗಳು ಹಾಗೂ ಮೂಲ್ಕಿಯ ಅಭಿವೃದ್ದಿಗಾಗಿ ಶ್ರಮಿಸುತ್ತಿರುವ ನಾಗರಿಕರ ತಂಡವು ಮೂಲ್ಕಿ ರೈಲು ನಿಲ್ದಾಣ ಮೂಲಸೌಕರ್ಯ ಅಭಿವೃದ್ದಿ ಹಾಗೂ ಮತ್ತಿತರ ಸಮಸ್ಯೆಗಳ ಬಗ್ಗೆ ಅಹವಾಲು ಸಲ್ಲಿಸಿದರು. 

 

ಮನವಿ ಆಲಿಸಿದ ಕ್ಯಾ. ಚೌಟ ಅವರು ಅದಕ್ಕೆ ಪ್ರತಿಕ್ರಿಯಿಸಿ, ಮೂಲ್ಕಿ ರೈಲು ನಿಲ್ದಾಣ ಅಭಿವೃದ್ದಿಗಾಗಿ ನಾನು ಸಕಲ ರೀತಿಯಲ್ಲೂ ಶ್ರಮಿಸುತ್ತೇನೆ ಎಂದೂ ಕೊಂಕಣ ರೈಲ್ವೆಯು ಅನುಭವಿಸುತ್ತಿರುವ ನಷ್ಟದಿಂದಾಗಿ ಕೊಂಕಣ ಮಾರ್ಗದ ಯಾವುದೇ ರೈಲು ನಿಲ್ದಾಣಗಳು ಅಭಿವೃದ್ಧಿಗೊಂಡಿಲ್ಲ. ಹೀಗಾಗಿ ಭಾರತೀಯ ರೈಲ್ವೆಯೊಂದಿಗೆ ಕೊಂಕಣ ರೈಲ್ವೆಯನ್ನು ವಿಲೀನಗೊಳಿಸಿದರೆ ಈ ಸಮಸ್ಯೆಗೂ ಪರಿಹಾರ ದೊರಕಲಿದೆ ಎಂದು ಇದಕ್ಕಾಗಿ ನಾನು ಶ್ರಮಿಸುತ್ತೇನೆ ಎಂದು ಭರವಸೆ ನೀಡಿದ್ದಾರೆ.

 

ಮೂಲ್ಕಿ ತಾಲೂಕಿನ ರಸ್ತೆ ಅಭಿವೃದ್ದಿ, ನೀರಿನ ಸಮಸ್ಯೆ, ಇತರ ಮೂಲಸೌಕರ್ಯ ಅಭಿವೃದ್ದಿ ಸೇರಿದಂತೆ ಅನೇಕ ವಿಚಾರಗಳ ಬಗ್ಗೆ ಸ್ಪಂದಿಸುವಂತೆ ಸ್ಥಳೀಯರು ಮನವಿ ಮಾಡಿದ್ದಾರೆ ಇದರ ಕುರಿತಾಗಿ ಪರಿಶೀಲಿಸಿದ ಸಂಸದರು, ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳುವುದಕ್ಕಾಗಿ ಪ್ರಯತ್ನಿಸುವೆ ಎಂದು ಹೇಳಿದ್ದಾರೆ.