ಕೋಲಾರ: ಕೋಲಾರ ಮೂಲದ ವಿವಾಹಿತ ವ್ಯಕ್ತಿಯೊಬ್ಬ ಹೆಂಡತಿ ಇರುವಾಗಲೇ ಇನ್ನೊಬ್ಬ ಯುವತಿಯನ್ನು ಪ್ರೀತಿಸಿದ್ದಾನೆ. ನಿನ್ನೆಯಷ್ಟೇ ಈತ ತನ್ನ ಪ್ರೇಯಸಿಯನ್ನು ಭೇಟಿಯಾಗಲು ಆಕೆಯ ಮನೆಗೆ ತೆರಳಿದ್ದ. ಇದನ್ನು ಗಮನಿಸಿ ಕೆರಳಿ ಕೆಂಡವಾದ ಯುವತಿಯ ಮನೆಯವರು ಪ್ರಿಯಕರನನ್ನು ನಡುರಸ್ತೆಯಲ್ಲೇ ಅಟ್ಟಾಡಿಸಿ ಕೊಂದಿದ್ದಾರೆ.ಸದ್ಯ, ಈ ದಾರುಣ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಈ ಬಗೆಗಿನ ವರದಿ ಇಲ್ಲಿದೆ.
ಪತ್ನಿಗೆ ಅನಾರೋಗ್ಯ, ಪತಿಗೆ ಪರಸಂಗ!
ಸದ್ಯ, ಕೊಲೆಯಾಗಿರುವ ಕೋಲಾರ ಮೂಲದ ಉಸ್ಮಾನ್ ಕಳೆದ ಐದು ವರ್ಷಗಳ ಹಿಂದೆ ಜಬೀನ್ ಎಂಬಾಕೆಯನ್ನು ಪ್ರೀತಿಸಿ ಮದುವೆಯಾಗಿದ್ದ. ಆದರೆ ಇತ್ತೀಚೆಗಷ್ಟೇ ಜಬೀನ್ ಅನಾರೋಗ್ಯಕ್ಕೀಡಾಗಿ ಹಾಸಿಗೆ ಹಿಡಿದಿದ್ದಳು.
ಈ ನಡುವೆ ಉಸ್ಮಾನ್ ಪತ್ನಿಯ ಸಂಬಂಧಿ ಯುವತಿಯನ್ನು ಪ್ರೀತಿಸಲು ಶುರು ಮಾಡಿದ್ದಾನೆ. ಈ ಹೊಸ ಜೋಡಿಗಳು ಕದ್ದುಮುಚ್ಚಿ ಭೇಟಿಯಾಗುತ್ತಿದ್ದರು. ಆದರೆ ನಿನ್ನೆ ಮಾತ್ರ ಇಬ್ಬರ ಗ್ರಹಚಾರ ಕೆಟ್ಟಿದೆ.
ಪ್ರೇಯಸಿ ಮನೆಗೆ ರಾತ್ರಿ ನುಗ್ಗಿದ ಉಸ್ಮಾನ್!
ಈ ಹೊಸ ಪ್ರೀತಿಗೆ ಪತ್ನಿ ಜುಬೀನಾ ವಿರೋಧ ವ್ಯಕ್ತ ಪಡಿಸಿದ್ದಳು. ಮತ್ತೊಂದೆಡೆ ಉಸ್ಮಾನ್ ತನ್ನ ಹೊಸ ಪ್ರೇಯಸಿಯನ್ನು ಬಿಡಲು ಒಪ್ಪುತ್ತಿರಲಿಲ್ಲ. ಅಂತಿಮವಾಗಿ ಆಕೆಯನ್ನು ಕರೆದುಕೊಂಡು ಓಡಿ ಹೋಗುವ ಪ್ಲಾನ್ ಮಾಡಿದ್ದ ಉಸ್ಮಾನ್ ರಾತ್ರೋರಾತ್ರಿ ಪ್ರೇಯಸಿಯ ಮನೆಗೆ ನುಗ್ಗಿದ್ದಾನೆ.
ಜೊತೆಗೆ ಆಕೆಯನ್ನು ಮದುವೆ ಮಾಡಿ ಕೊಡುವಂತೆ ಆವಾಜ್ ಹಾಕಿದ್ದಾನೆ. ಇದರಿಂದ ಕೆರಳಿ ಕೆಂಡವಾದ ಹುಡುಗಿಯ ಮನೆಯವರು ಪಾಗಲ್ ಪ್ರೇಮಿಯನ್ನು ನಡು ರಸ್ತೆಯಲ್ಲಿ ಅಟ್ಟಾಡಿಸಿ ಕೊಲೆ ಮಾಡಿದ್ದಾರೆ.