ಬೆಂಗಳೂರು: ಎರಡು ಮುದ್ದಾದ ಮಕ್ಕಳು ಕೈತುಂಬ ಹಣ ಸುಂದರವಾದ ಸಂಸಾರ ಅವರದ್ದಾಗಿತ್ತು. ಆದರೆ ರಾತ್ರೋರಾತ್ರಿ ಈ ಸಂಸಾರಕ್ಕೆ ಯಾರ ಕಣ್ಣು ಬಿತ್ತೋ ಏನೋ ದಿನ ಬೆಳಗಾಗುವುದರಲ್ಲಿ ಇಬ್ಬರು ಮಕ್ಕಳು ಮತ್ತು ಗಂಡ-ಹೆಂಡತಿ ಹೆಣವಾಗಿದ್ದಾರೆ. ಸ್ವತಃ ಈ ಟೆಕ್ಕಿ ದಂಪತಿಗಳು ತಮ್ಮ ಮಕ್ಕಳನ್ನು ತಾವೇ ಹತ್ಯೆಗೈದು ಬಳಿಕ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂಬುದು ಬೆಳಕಿಗೆ ಬಂದಿದೆ. ಈ ದುರಂತದ ಹಿಂದಿನ ಅಸಲಿ ಕತೆಯನ್ನು ಡೆತ್ ನೋಟ್ ನಲ್ಲಿ ದಂಪತಿಗಳು ಬರೆದಿಟ್ಟಿದ್ದಾರೆ.
ಕೆಲಸದವರಿಂದ ಬೆಳಕಿಗೆ ಬಂದ ಘಟನೆ!
ಬೆಂಗಳೂರಿನ ಸದಾಶಿವ ನಗರದಲ್ಲಿ ಅನೂಪ್ ಹಾಗೂ ಪತ್ನಿ ಇಬ್ಬರು ಮಕ್ಕಳೊಂದಿಗೆ ವಾಸಿಸುತ್ತಿದ್ದರು.ಅನೂಪ್ ಖಾಸಗಿ ಕಂಪೆನಿಯಲ್ಲಿ ಉದ್ಯೋಗಿಯಾಗಿದ್ದು, ಕೈತುಂಬ ಸಂಪಾದಿಸುತ್ತಿದ್ದರು. ಜ.5ರ ರಾತ್ರಿಯ ವರೆಗೂ ಖುಷಿ ಖುಷಿಯಾಗಿದ್ದ ಕುಟುಂಬ ಬೆಳಗ್ಗೆ ಹೆಣವಾಗಿದ್ದಾರೆ. ಬೆಳಗ್ಗೆ 11 ಗಂಟೆಯ ಹೊತ್ತಿಗೆ ಕೆಲಸದವರು ಬಂದು ನೋಡಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಘಟನಾ ಸ್ಥಳಕ್ಕೆ ಸದಾಶಿವ ನಗರ ಪೊಲೀಸರಯ ಭೇಟಿ ನೀಡಿ ಪರಿಶೀಲನೆ ನಡೆಸಿದಾಗ ಸಾವಿಗೆ ನಿಖರ ಕಾರಣ ಡೆತ್ ನೋಟ್ ನಿಂದ ಬಯಲಾಗಿದೆ.
ಡೆತ್ ನೋಟ್ ನಲ್ಲಿ ಏನಿತ್ತು?
ಅನೂಪ್ ಬರೆದಿರುವ ಡೆತ್ ನೋಟ್ ನಲ್ಲಿ, 'ನನ್ನ ಪತ್ನಿ ಅನುಪ್ರಿಯಾಗೆ ಆರೋಗ್ಯ ಸಮಸ್ಯೆಯಿತ್ತು. ಜೊತೆಗೆ ಮೊದಲ ಮಗು ಮಾನಸಿಕ ಸಮಸ್ಯೆಯಿಂದ ಬಳಲುತ್ತಿತ್ತು. ಇದರಿಂದ ನಾನು ಮಾನಸಿಕವಾಗಿ ಸಾಕಷ್ಟು ನೊಂದಿದ್ದೆ. ರಾಕೇಶ್ ಎಂಬ ಸಂಬಂಧಿಯೊಬ್ಬ ಹಣ ಪಡೆದು ಮೋಸ ಮಾಡಿದ್ದ. ಜೊತೆಗೆ ಸಂಬಂಧಿಕರು ನಮ್ಮನ್ನು ದೂರ ಮಾಡಿದ್ದರು. ಈ ಎಲ್ಲ ಕಾರಣಗಳಿಂದ ಜರ್ಜರಿತವಾಗಿ ಬದುಕು ಸಾಕಾಗಿದೆ' ಎಂದು ಬರೆದುಕೊಂಡಿದ್ದಾರೆ.