ಮಂಗಳೂರು| ಇವಳೆಂಥಾ ಮಹಾತಾಯಿ...!! ನಾಲ್ಕು ಮಗುವಿಗೆ ಏಕಕಾಲದಲ್ಲಿ ಜನ್ಮ ನೀಡಿದ ಜನ್ಮದಾತೆ...! ವೈದ್ಯರೇ ಶಾಕ್..!!

  • 07 Jan 2025 03:19:01 PM

ಮಂಗಳೂರು: ಹೆತ್ತ ತಾಯಿಗೆ ಹೆಗ್ಗಣವೂ ಮುದ್ದು ಎಂಬ ಮಾತಿದೆ. ತನ್ನ ಮಗುವಿಗಾಗಿ ತನ್ನ ಸರ್ವಸ್ವವನ್ನೂ ಧಾರೆಯೆರೆಯುವ ತಾಯಿ ತ್ಯಾಗಮಯಿ. ತನ್ನ ಮಕ್ಕಳಿಗಾಗಿ ಅವಳೆಂಥಾ ಕಷ್ಟವನ್ನೂ ಎದುರಿಸಲು ತಯಾರಾಗಿರುತ್ತಾಳೆ. ಅಂತಹ ಕಣ್ಣಿಗೆ ಕಾಣುವ ದೇವರಿಗೆ ನಾವು ಯಾವಾಗಲೂ ಧನ್ಯರಾಗಿರಲೇಬೇಕು. ಇಲ್ಲೊಬ್ಬ ತಾಯಿಯ ಅಪರೂಪದ ಕಾರ್ಯವನ್ನು ನಾವು ಮೆಚ್ಚಲೇಬೇಕು.

 

ಸೆಸೇರಿಯನ್ ಮೂಲಕ ನಾಲ್ಕು ನವಜಾತ ಶಿಶುವಿಗೆ ಜನ್ಮ ನೀಡಿದ ತಾಯಿ..!!

 

ನವೆಂಬರ್‌ 9ರಂದು ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಸೆಸೇರಿಯನ್‌ ಮೂಲಕ ಹೆರಿಗೆಯಾಗಿದೆ. ಹುಟ್ಟಿದ ನಾಲ್ಕೂ ಕೂಸುಗಳಿಗೆ ನವಜಾತ ಶಿಶುಗಳ ತೀವ್ರ ನಿಗಾ ಘಟಕದಲ್ಲಿ ಆರೈಕೆ ನೀಡಲಾಗಿದ್ದು ಕೆಲ ದಿನಗಳ ಹಿಂದೆಯಷ್ಟೇ ತಾಯಿ ತಂದೆ ತಮ್ಮ ಮಕ್ಕಳೊಂದಿಗೆ ಮನೆಗೆ ತೆರಳಿದ್ದಾರೆ. ಹುಟ್ಟಿರುವ ಮಕ್ಕಳಲ್ಲಿ ಎರಡು ಗಂಡಾದರೆ ಎರಡು ಹೆಣ್ಣು.

 

ಈ ಅಪರೂಪದ ಘಟನೆಯ ಕುರಿತು ಆಸ್ಪತ್ರೆಯವರು ವಿವರ ನೀಡಿದ್ದಾರೆ. ಹುಟ್ಟುವಾಗ ಮಕ್ಕಳ ತೂಕ 1.1 ಕೆಜಿ, 1.2 ಕೆಜಿ, 800 ಗ್ರಾಮ್‌ ಹಾಗೂ 900 ಗ್ರಾಂ ಇದ್ದು ಕಳೆದೆರಡು ತಿಂಗಳಿನಿಂದ ನವಜಾತ ಶಿಶುಗಳ ವಾರ್ಡ್‌ನಲ್ಲಿ ಆರೈಕೆ ನೀಡಲಾಗಿತ್ತು. 

 

ಗರ್ಭದಲ್ಲಿ ನಾಲ್ಕು ಮಕ್ಕಳಿರೋದು ಗೊತ್ತಾಗಿ ದಂಪತಿ ಫುಲ್ ಖುಷ್..!

 

ತೆಲಂಗಾಣ ಮೂಲದ ದಂಪತಿಗಳಾದ ತೇಜ ಹಾಗೂ ಬಾನೊತ್‌ ದುರ್ಗಾ ನಾಲ್ಕು ಮಕ್ಕಳನ್ನು ಪಡೆದ ಸಂಭ್ರಮದಲ್ಲಿದ್ದಾರೆ. ತೇಜ ಅವರು ಮಂಗಳೂರಿನಲ್ಲಿ ರೈಲ್ವೇ ಇಲಾಖೆಯಲ್ಲಿ ಅಧಿಕಾರಿಯಾಗಿದ್ದಾರೆ. ದುರ್ಗಾ ಅವರು ಗರ್ಭಧರಿಸಿದ ಬಳಿಕ ಸ್ಕ್ಯಾನಿಂಗ್ ಗೆಂದು ಫಾಧರ್ ಮುಲ್ಲರ್ ಆಸ್ಪತ್ರೆಗೆ ಬಂದಾಗ ನಾಲ್ಕು ಶಿಶುಗಳಿರುವುದು ಗೊತ್ತಾಗಿದೆ.

 

ಈ ಗರ್ಭಧಾರಣೆ ಹಾಗೂ ಹೆರಿಗೆ ವೇಳೆಯ ಗಂಭೀರತೆ ಬಗ್ಗೆ ವೈದ್ಯರು ಅವರಿಗೆ ವಿವರಿಸಿದ್ದಾರೆ. ಅಗತ್ಯವಿದ್ದರೆ ಶಿಶುಗಳ ಸಂಖ್ಯೆಯನ್ನು ಇಳಿಸುವ(ಫೀಟಲ್‌ ರಿಡಕ್ಷನ್‌) ಆಯ್ಕೆ ಇದೆಯೆಂದೂ ಸಲಹೆಯನ್ನು ನೀಡಿದ್ದಾರೆ. ಆದರೆ ದಂಪತಿಗಳು ನಾಲ್ಕೂ ಮಕ್ಕಳನ್ನೂ ಉಳಿಸಿಕೊಳ್ಳುವುದಕ್ಕೆ ಮುಂದಾಗಿರುವುದರ ಬಗ್ಗೆ ಖುಷಿ ವ್ಯಕ್ತಪಡಿಸಿದ್ದಾರೆ ಖ್ಯಾತ ಗೈನಾಕಾಲೋಜಿಸ್ಟ್ ಆಗಿರುವ ಡಾ. ಅಲ್ಮೇಡ ಅವರು. 

 

ಏಳು ಲಕ್ಷದಲ್ಲಿ ಒಂದು ಇಂತಹ ಅಪರೂಪದ ಪ್ರಕರಣಗಳಿರೋಕೆ ಸಾಧ್ಯ...!

 

ಸಾಮಾನ್ಯವಾಗಿ ಐವಿಎಫ್‌ ಕೃತಕ ಗರ್ಭಧಾರಣೆಯಲ್ಲಿ ಈ ರೀತಿ ಒಂದಕ್ಕಿಂತ ಹೆಚ್ಚು ಮಕ್ಕಳ ಜನನವಾಗುವುದು ಹೆಚ್ಚು, ಆದರೆ ಇದು ಸಹಜ ಗರ್ಭಧಾರಣೆಯದ್ದಾಗಿದ್ದರಿಂದ ಇಂತಹ ಪ್ರಕರಣ ಬಹಳ ಅಪರೂಪ. ಈ ಬಗ್ಗೆ ಅಚ್ಚರಿ ವ್ಯಕ್ತಪಡಿಸಿರುವ ವೈದ್ಯರು 7 ಲಕ್ಷದಲ್ಲಿ ಒಂದು ಪ್ರಕರಣ ಇಂಥದ್ದು ಬರುತ್ತದೆ, ಇಂತಹ ಕೇಸ್‌ ನಿಭಾಯಿಸುವುದು ಬಹಳ ಕ್ಲಿಷ್ಟಕರ.

 

14 ವರ್ಷಗಳ ಹಿಂದೆ ಕೆಎಂಸಿಯಲ್ಲಿ ಇಂತಹದೇ ನಾಲ್ಕು ಮಕ್ಕಳ ಜನನವಾಗಿತ್ತು, ಅದರಲ್ಲಿ ನಾಲ್ಕೂ ಮಕ್ಕಳು ಗಂಡು ಎನ್ನುವುದು ಗಮನಾರ್ಹ. ಈ ಪ್ರಕರಣದಲ್ಲಿ 31 ವಾರಗಳ ಕಾಲ ದುರ್ಗಾ ಅವರನ್ನು ನಿರಂತರ ಪರಿಶೀಲನೆ ಮಾಡಲಾಗುತ್ತಿತ್ತು. ಹಿಂದೆ ಆಕೆಗೆ ಒಮ್ಮೆ ಸೆಸೇರಿಯನ್‌ ಆಗಿದ್ದು, ಒಂದು ಮಗುವಿದೆ, ಹಾಗಾಗಿ ಗರ್ಭಕೋಶದಲ್ಲಿ ಅದರ ಹೊಲಿಗೆ ಇರುವುದರಿಂದ ಮತ್ತೆ ಸೆಸೇರಿಯನ್‌ ಮಾಡುವಾಗ ಸೂಕ್ಷ್ಮ ವಿಚಾರಗಳಲ್ಲಿ ಹೆಚ್ಚಿನ ನಿಗಾ ಅಗತ್ಯವಿತ್ತು.

 

ನಾಲ್ಕು ಶಿಶುಗಳಿದ್ದುದರಿಂದ ಎಲ್ಲಾ ವೈದ್ಯರ ಟೀಂ ವರ್ಕ್‌ ಅಗತ್ಯವಿದ್ದು, ಈ ಇಡೀ ಪ್ರಕ್ರಿಯೆಯಲ್ಲಿ ರೇಡಿಯೇಶನ್‌ ವಿಭಾಗದ ಡಾ|ಮುರಳೀಧರ್‌, ಡಾ.ರಾಮ್‌ ಭಾಸ್ತಿ ಮತ್ತು ಡಾ|ಮಹೇಶ್‌, ಪ್ರಸೂತಿ ವಿಭಾಗದ ಡಾ|ವಿಸ್ಮಯ, ಡಾ|ಏಕ್ತ, ಡಾ|ದಿಯಾ, ಡಾ|ನಯನ, ಮಕ್ಕಳ ತಜ್ಞೆ ಡಾ.ಚಂದನಾ ಪೈ ಮತ್ತಿತರರು ನೆರವು ನೀಡಿದರು' ಎಂದು ಹೇಳಿದ್ದಾರೆ. ಒಟ್ಟಿನಲ್ಲಿ ನಾಲ್ಕು ಮಕ್ಕಳನ್ನು ಏಕಕಾಲದಲ್ಲಿ ಅದರಲ್ಲೂ ಸಹಜ ಗರ್ಭದಾರಣೆಯಲ್ಲೇ ಹೆತ್ತ ಈ ಮಹಾತಾಯಿಯ ಕಾರ್ಯಕ್ಕೆ ಎಲ್ಲರೂ ಶ್ಲಾಘನೆ ವ್ಯಕ್ತಪಡಿಸಿ ಗ್ರೇಟ್ ಮದರ್ ಎಂದಿದ್ದಾರೆ.