ಚಾಮರಾಜನಗರ:ಇತ್ತೀಚಿನ ದಿನಗಳಲ್ಲಿ ದಿಢೀರ್ ಕಾಣಿಸಿಕೊಳ್ಳುವ ಹೃದಯಾಘಾತ ಪ್ರಕರಣಗಳು ಹೆಚ್ಚುತ್ತಿವೆ. ಇದಕ್ಕೆ ಹೆಚ್ಚಾಗಿ ಯುವಕರು ಹಾಗೂ ಮಕ್ಕಳು ಬಲಿಯಾಗುತ್ತಿರುವುದೇ ವಿಪರ್ಯಾಸದ ಸಂಗತಿ. ಇದೀಗ 3ನೇ ತರಗತಿ ವಿದ್ಯಾರ್ಥಿನಿಯೊಬ್ಬಳು ತರಗತಿಯಲ್ಲೇ ಕುಸಿದು ಬಿದ್ದು ಹೃದಯಾಘಾತದಿಂದ ಮೃತಪಟ್ಟಿದ್ದು, ಹೆತ್ತವರ ಆಕ್ರಂದನ ಮುಗಿಲು ಮುಟ್ಟಿದೆ.
ತರಗತಿಯಲ್ಲೇ ಸಾವನಪ್ಪಿದ ವಿದ್ಯಾರ್ಥಿನಿ!
ಈ ಹೃದಯವಿದ್ರಾವಕ ಘಟನೆ ಚಾಮರಾಜನಗರದ ಸೆಂಟ್ ಪ್ರಾನ್ಸಿಸ್ ಖಾಸಗಿ ಶಾಲೆಯಲ್ಲಿ ನಡೆದಿದೆ. ಬದನಗುಪ್ಪೆ ಗ್ರಾಮದ ನಿಂಗರಾಜು ಹಾಗೂ ಶೃತಿ ದಂಪತಿಯ ಪುತ್ರಿ ಈ ತೇಜಸ್ವಿನಿ ಮೃತ ವಿದ್ಯಾರ್ಥಿನಿ.
ಮೃತ ತೇಜಸ್ವಿನಿ ಬೆಳಗ್ಗೆ ಆರಾಮವಾಗಿಯೇ ಶಾಲೆಗೆ ತೆರಳಿದ್ದಳು ಆದರೆ ತರಗತಿ ನಡೆಯುತ್ತಿದ್ದಾಗ ಏಕಾಏಕಿ ಕುಸಿದು ಬಿದ್ದಿದ್ದಾಳೆ. ತಕ್ಷಣವೇ ಈಕೆಯನ್ನು ಆಸ್ಪತ್ರೆಗೆ ಸೇರಿಸಲಾಯಿತಾದರೂ ಆಕೆ ಬದುಕುಳಿಯಲಿಲ್ಲ.
ಮುಗಿಲು ಮುಟ್ಟಿದ ಆಕ್ರಂದನ!
ಮಗಳ ಸಾವಿನ ಸುದ್ದಿ ತಿಳಿದ ಪೋಷಕರು ಆಸ್ಪತ್ರೆಗೆ ಧಾವಿಸಿದ್ದಾರೆ. ಒಂದು ದಿನವೂ ಅನಾರೋಗ್ಯದಿಂದ ಬಳಲದ ಮಗಳು ಏಕಾಏಕಿ ಹೃದಯಾಘಾತದಿಂದ ಮೃತಪಟ್ಟ ವಿಚಾರ ತಿಳಿದು ಆಸ್ಪತ್ರೆಯ ಎದುರೇ ಅತ್ತು ಗೋಳಾಡಿದ್ದಾರೆ. ಮಗಳ ಶವಪರೀಕ್ಷೆಗೆ ಒಪ್ಪದ ನಿಂಗರಾಜು ಹಾಗೂ ಶೃತಿ ಅಂತ್ಯಕ್ರಿಯೆಗಾಗಿ ಮೃತದೇಹದ ಪಡೆದುಕೊಂಡಿದ್ದಾರೆ.ಒಟ್ಟಾರೆಯಾಗಿ ಇಡೀ ಚಾಮರಾಜನಗರ ಈ ಸಾವು ನ್ಯಾಯವೇ ಎಂದು ಮರುಕ ಪಡುತ್ತಿದೆ.