ಚಿಕ್ಕಮಂಗಳೂರು: ಆಸ್ತಿ, ಭೂಮಿ ವಿಚಾರಕ್ಕೆ ಸಂಬಂಧಿಸಿದಂತೆ, ರಿಯಲ್ ಎಸ್ಟೇಟ್ ವ್ಯವಹಾರಕ್ಕೆ ಸಂಬಂಧಿಸಿದಂತೆ ವಾದ, ವಾಗ್ವಾದಗಳು ನಡೆಯುವುದು ಮಾಮೂಲಿ. ಆದರೆ ಇಲ್ಲಿ ಎಸ್ಟೇಟ್ ಮ್ಯಾನೇಜರ್ ಮೇಲೆಯೇ ಹಲ್ಲೆ ನಡೆದಿದೆ. ಯಾಕೆ ಅಂತೀರಾ..? ಈ ಸ್ಟೋರಿ ನೋಡಿ.
ಎಸ್ಟೇಟ್ ಮ್ಯಾನೇಜರ್ ಮೇಲೆ ಮರದ ದಿಮ್ಮಿ, ಕಲ್ಲುಗಳಿಂದ ಹಲ್ಲೆ ಮಾಡಿದ ದುಷ್ಕರ್ಮಿಗಳು...!
ಹೌದು. ಎಸ್ಟೇಟ್ ಮ್ಯಾನೇಜರ್ ಒಬ್ಬರ ಮೇಲೆ ಅಕ್ರಮ ಬಾಂಗ್ಲಾ ವಲಸಿಗರು ಕಲ್ಲು ತೂರಾಟ ನಡೆಸಿದ ಘಟನೆ ಕೊಪ್ಪ ತಾಲೂಕಿನ ಹೂವಿನಗುಂಡಿ ಗ್ರಾಮದಲ್ಲಿ ನಡೆದಿದೆ. ಹಲ್ಲೆಗೊಳಗಾದ ಎಸ್ಟೇಟ್ ಮ್ಯಾನೇಜರ್ ಅನ್ನು ಕೀರ್ತಿರಾಜ್ ಎಂದು ಗುರುತಿಸಲಾಗಿದೆ. ಮರದ ದಿಮ್ಮೆಯಿಂದ ಕೂ ಡಾ ಹಲ್ಲೆಗೆ ಯತ್ನಿಸಲಾಗಿದೆ. ಸುಮಾರು 50 ಜನರು ಅವರ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ ಎಂದು ಆರೋಪಿಸಲಾಗುತ್ತಿದೆ.
ಐವತ್ತು ವರ್ಷದ ಹಿಂದಿನ ಜಮೀನು ವಿವಾದವೇ ಹಲ್ಲೆಗೆ ಕಾರಣ...!
ಕೀರ್ತಿರಾಜ್ ಹಾಗೂ ಭದ್ರಾ ಎಸ್ಟೇಟ್ ಮಧ್ಯೆ ಜಮೀನು ವಿವಾದ ನಡೆಯುತ್ತಲೇ ಇತ್ತು. 50 ವರ್ಷದ ಹಿಂದಿನ ವಿವಾದ ಹೈಕೋರ್ಟಿನಲ್ಲಿ ಸುಬ್ಬಣ್ಣ ಅವರ ಪರ ಆಗಿದ್ದು ತಾರ್ಕಿಕ ಅಂತ್ಯ ಕಂಡಿತ್ತು. ಸುಬ್ಬಣ್ಣ ಅವರ ಮಗ ಕೀರ್ತಿರಾಜ್ ತೋಟಕ್ಕೆ ಹೋಗಿದ್ದ ಸಂದರ್ಭ ಅವರ ಮೇಲೆ ಕಲ್ಲು ತೂರಾಟ ನಡೆದಿದೆ. ದ್ವೇಷದಿಂದಲೇ ಈ ಕೃತ್ಯ ನಡೆದಿದೆ ಎನ್ನಲಾಗುತ್ತಿದೆ.
ಕಲ್ಲೇಟಿನಿಂದ ಗಾಯಗೊಂಡಿರುವ ಕೀರ್ತಿರಾಜ್ ಅವರನ್ನು ಜಯಪುರ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನು ಅಲ್ಲಿ ನಡೆದ ಈ ಘಟನೆಯನ್ನು ಅಲ್ಲಿಯ ಸ್ಥಳೀಯರು ತೀವ್ರವಾಗಿ ವಿರೋಧಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಸ್ಸಾಂನವರು ಎಂದು ಇಲ್ಲಿಗೆ ಕೆಲಸಕ್ಕೆ ಬರುತ್ತಾರೆ. ಆದರೆ ಅವರು ಅಸ್ಸಾಂನವರಲ್ಲ. ಅವರೆಲ್ಲಾ ಅಕ್ರಮ ಬಾಂಗ್ಲಾ ನಿವಾಸಿಗಳು ಎಂದು ಸ್ಥಳೀಯರು ಆರೋಪಿಸಿದ್ದಾರೆ. ಈ ಬಗ್ಗೆ ಜಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.