ಅಯೋಧ್ಯ: ರಾಮಜನ್ಮಭೂಮಿ ಅಯೋಧ್ಯೆಯಲ್ಲಿ ಈಗಾಗಲೇ ಬಾಲರಾಮನ ಪ್ರತಿಷ್ಟಾಪನೆ ಮಾಡಲಾಗಿದೆ. ದಿನಂಪ್ರತಿ ಅನೇಕ ಸಂಖ್ಯೆಯಲ್ಲಿ ಇಲ್ಲಿಗೆ ಭಕ್ತರು ರಾಮನ ದರ್ಶನಕ್ಕಾಗಿ ಆಗಮಿಸುತ್ತಿರುತ್ತಾರೆ.
ಹಿಂದೂಗಳ ಪವಿತ್ರ ಕೇಂದ್ರವಾದ ಅಯೋಧ್ಯೆಯಲ್ಲಿ ಭದ್ರತೆ ದೃಷ್ಟಿಯಿಂದ ಅನೇಕ ಮುಂಜಾಗ್ರತಾ ಕ್ರಮಗಳನ್ನು ಕೂಡಾ ಅನುಸರಿಸಲಾಗುತ್ತಿದೆ. ಇದೀಗ ರಾಮನ ದರ್ಶನಕ್ಕಾಗಿ ಅಯೋಧ್ಯೆಗೆ ಬಂದಿದ್ದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ಯಾಕೆ ಅಂತೀರಾ..ಈ ಸ್ಟೋರಿ ನೋಡಿ.
ಸನ್ ಗ್ಲಾಸ್ ಬಳಸಿ ರಾಮಮಂದಿರ ಚಿತ್ರೀಕರಣ..!
ರಾಮಜನ್ಮಭೂಮಿಯಲ್ಲಿ ಕ್ಯಾಮೆರಾ ಅಳವಡಿಸಿದ ಸನ್‌ಗ್ಲಾಸ್‌ಗಳನ್ನು ಹಿಡಿದುಕೊಂಡು ಫೋಟೋ ಕ್ಲಿಕ್ಕಿಸುತ್ತಿದ್ದ ಯುವಕನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಗುಜರಾತ್‌ನ ವಡೋದರಾದ ಜಾನಿ ಜೈಕುಮಾರ್ ಬಂಧಿತ ಆರೋಪಿ.
ರಾಮಜನ್ಮಭೂಮಿ ಮಾರ್ಗದಲ್ಲಿ ಅನೇಕ ಚೆಕ್‌ಪೋಸ್ಟ್‌ಗಳ ಮೂಲಕ ಈತ ಯಾರಿಗೂ ಅನುಮಾನ ಬಾರದಂತೆ ಹಾದು ಹೋಗಿದ್ದಾನೆ. ಸೋಮವಾರ ದೇವಾಲಯದ ಸಂಕೀರ್ಣದ ಸಿಂಗ್‌ದ್ವಾರದ ಬಳಿ ತಲುಪಿದ್ದ ಆತನನ್ನು ಭದ್ರತಾ ಸಿಬ್ಬಂದಿ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಈತ ಸಿಕ್ಕಿಬಿದ್ದಿದ್ದು ಹೇಗೆ...?
ಕನ್ನಡಕ ಧರಿಸಿ ಮಾಮೂಲಿ ಜನರಂತೆ ಈತ ರಾಮಮಂದಿರ ವೀಕ್ಷಿಸುತ್ತಿದ್ದ. ಕ್ಯಾಮೆರಾ ಅಳವಡಿಸಿದ್ದ ಕನ್ನಡಕದೊಂದಿಗೆ ಆರೋಪಿ ಫೋಟೋಗಳನ್ನು ತೆಗೆಯುತ್ತಿದ್ದಾಗ ಕ್ಯಾಮೆರಾ ಲೈಟ್ ಮಿಂಚಿದೆ. ಅದನ್ನು ಪತ್ತೆ ಹಚ್ಚಿದ ಭದ್ರತಾ ಸಿಬ್ಬಂದಿ ಆತನನ್ನು ವಶಕ್ಕೆ ಪಡೆದಿದ್ದಾರೆ.
ಸುರಕ್ಷತೆಯ ಕಾರಣಗಳಿಗಾಗಿ ಮಂದಿರದಲ್ಲಿ ಛಾಯಾಗ್ರಹಣ ಮತ್ತು ವೀಡಿಯೊಗ್ರಫಿ ನಿಷೇಧಿಸಲಾಗಿದೆ. ಆರೋಪಿ ಈ ನಿಯಮವನ್ನು ಉಲ್ಲಂಘಿಸಿದ್ದಾನೆ ಎಂದು ಆರೋಪಿಸಲಾಗಿದೆ. ಇನ್ನು ಕ್ಯಾಮೆರಾ ಅಳವಡಿಸಿದ್ದ ಈ ಕನ್ನಡಕದ ಬೆಲೆ ಸುಮಾರು 50,000 ರೂ. ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ.
ಈತ ಈ ರೀತಿ ಕನ್ನಡಕದಲ್ಲಿ ಕ್ಯಾಮೆರಾ ಸೆಟ್ ಮಾಡಿ ಅಯೋಧ್ಯೆ ರಾಮಮಂದಿರದ ವೀಡಿಯೋ ಚಿತ್ರೀಕರಿಸಲು ಕಾರಣವೇನು ಎಂಬುವುದು ಕುತೂಹಲಕ್ಕೆ ಕಾರಣವಾಗಿದೆ. ಆರೋಪಿಯನ್ನು ಬಂಧಿಸಿದ ಎಸ್‌ಎಸ್‌ಎಫ್ ಜವಾನ್ ಅನುರಾಗ್ ಬಾಜ್‌ಪೇಯ್ ಅವರಿಗೆ ಬಹುಮಾನ ನೀಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬಂಧಿತನ ಹಿನ್ನೆಲೆ, ಆತ ಅಯೋಧ್ಯೆಗೆ ಬಂದಿರುವ ಕಾರಣವನ್ನು ಪತ್ತೆಹಚ್ಚಲು ಆತನನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಲಾಗಿದೆ ಎಂದು ತಿಳಿಸಲಾಗಿದೆ.