ಉಡುಪಿ : ಇತ್ತೀಚೆಗಷ್ಟೇ ಎನ್ಕೌಂಟರ್ ಮೂಲಕ ಹತ್ಯೆಯಾದ ಮೋಸ್ಟ್ ವಾಂಟೆಡ್ ನಕ್ಸಲ್ ವಿಕ್ರಂ ಗೌಡನ ಘಟನೆ ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿತ್ತು. ಇದರಿಂದ ತಲೆಮರೆಸಿಕೊಂಡಿದ್ದ ಇನ್ನುಳಿದ ನಕ್ಸಲರು ಕೂಡಾ ಆತಂಕಕ್ಕೀಡಾಗಿದ್ದರು. ಇದೀಗ ಆರು ಜನ ನಕ್ಸಲರು ಸ್ವಯಂಪ್ರೇರಿತರಾಗಿ ಶರಣಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಜಿಲ್ಲಾಡಳಿತದ ಮುಂದೆ ಆರು ನಕ್ಸಲರು ಸರೆಂಡರ್..!
ಚಿಕ್ಕಮಗಳೂರು ಜಿಲ್ಲಾಡಳಿತದ ಸರ್ಕಾರ ರಚನೆ ಮಾಡಿರುವ ಕಮಿಟಿಯ ಎದುರು 6 ಜನ ನಕ್ಸಲರು ಶರಣಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಶಾಂತಿಗಾಗಿ ನಾಗರೀಕ ವೇದಿಕೆಯಡಿಯಲ್ಲಿ ಇವರು ಶರಣಾಗಲಿದ್ದಾರಂತೆ. ನಕ್ಸಲ್ ಶರಣಾಗತಿಗೆ ದಿನಾಂಕ ಫಿಕ್ಸ್ ಆಗಿದೆ. ಇವರು ದಕ್ಷಿಣ ಭಾರತದ 4 ರಾಜ್ಯಗಳಿಗೆ ಬೇಕಾಗಿರುವ ನಕ್ಸಲರಾಗಿದ್ದಾರೆ.
ಈ ತಂಡದ ನಕ್ಸಲ್ ನಾಯಕಿ ಚಿಕ್ಕಮಗಳೂರು ಜಿಲ್ಲೆಯ ಮುಂಡಗಾರು ಲತಾ ಸೇರಿದಂತೆ ಪ್ರಮುಖ ನಕ್ಸಲರು ಶರಣಾಗತಿಗೆ ಮುಂದಾಗಿದ್ದಾರೆ. ವನಜಾಕ್ಷಿ, ದಕ್ಷಿಣ ಕನ್ನಡ ಜಿಲ್ಲೆಯ ಸುಂದರಿ, ಕೇರಳದ ಜೀಶ, ತಮಿಳುನಾಡಿನ ವಸಂತ ಕೆ.ಅಲಿಯಾಸ್ ರಮೇಶ, ಆಂಧ್ರಪ್ರದೇಶದ ಮಾರೆಪ್ಪ ಅರೋಲಿ ಶರಣಾಗಲಿದ್ದಾರೆ ಎನ್ನಲಾಗಿದೆ. ಮಾಜಿ ನಕ್ಸಲ್ ನೂರ್ ಜುಕರ್ ಶ್ರೀಧರ್ ನೇತೃತ್ವದಲ್ಲಿ ಶರಣಾಗತಿಗೆ ಮುಂದಾಗಿದ್ದಾರೆ.
ಅಣ್ಣನ ಪ್ರಾಣ ವಾಪಸ್ ಕೊಡಲು ಸಾಧ್ಯವಿಲ್ಲ, ಪರಿಹಾರವನ್ನಾದ್ರೂ ಕೊಡಿ...!
ನಕ್ಸಲರ ಶರಣಾಗತಿ ವಿಚಾರದ ಕುರಿತು ಎನ್ಕೌಂಟರ್ ಬಲಿಯಾದ ನಕ್ಸಲ್ ವಿಕ್ರಂ ಗೌಡ ಅವರ ಸೋದರಿ ಸುಗುಣ ಅವರು ಪ್ರತಿಕ್ರಿಯಿಸಿದ್ದಾರೆ. ನಾವು ಕಷ್ಟದಲ್ಲಿದ್ದೇವೆ ಸ್ವಂತ ಮನೆಯಾಗಬೇಕಿದೆ.
ಒಂದು ದಿನ ಕೆಲಸಕ್ಕೆ ಹೋಗದೆ ಇದ್ದರೆ ನಮ್ಮ ದಿನ ಸಾಗೋದಿಲ್ಲ. ಶರಣಾಗುವ ನಕ್ಸಲರಿಗೆ ಪರಿಹಾರ ಕೊಡ್ತೇವೆ ಅಂತಿದ್ದೀರಿ. ನಮಗೂ ಕೊಡಿ. ಅಣ್ಣನ ಜೀವವನ್ನಂತೂ ಹಿಂದೆ ಕೊಡಲು ಸಾಧ್ಯವಿಲ್ಲ. ಇದನ್ನಾದ್ರೂ ಮಾಡಿ...' ಎಂದು ಮನವಿ ಮಾಡಿದ್ದಾರೆ.