ಮಡಿಕೇರಿ : ಕೋಳಿಯ ಕಾಲು ಸುಟ್ಟಿಲ್ಲ ಎಂಬ ಕಾರಣಕ್ಕೆ ಬಾವನೊಬ್ಬ ತನ್ನ ಬಾಮೈದುನನ್ನು ಕೊಲೆ ಮಾಡಿರುವ ಘಟನೆ ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಕದೆಮುಳ್ಳೂರು ತೋರ ಗ್ರಾಮದಲ್ಲಿ ನಡೆದಿದೆ. ಕೊಲೆಯಾದ ವ್ಯಕ್ತಿಯನ್ನು 25 ವರ್ಷದ ಮಂಜು ಹಾಗೂ ಕೊಲೆ ಮಾಡಿರುವ ಬಾವನನ್ನು 34 ವರ್ಷದ ಅಭಿ ಎಂದು ಗುರುತಿಸಲಾಗಿದೆ. ಈ ಕೋಳಿ ಕಾಲಿನ ಕ್ರೈಂ ಕಥನ ಇಲ್ಲಿದೆ ನೋಡಿ.
ಕೋಳಿ ಕಾಲು ಸುಡದಿದ್ದಕ್ಕೆ ಕೊಲೆ!
ಮೃತ ಮಂಜು ಹಾಗೂ ಅಭಿ ಜ.7ರಂದು ರಾತ್ರಿ ಕಾಫಿ ತೋಟದ ಕಾವಲಿಗೆ ಕುಳಿತಿದ್ದರು. ಇಬ್ಬರೂ ಕೂಡ ಹೆಂಡದ ಅಮಲಿನಲ್ಲಿದ್ದರು. ಈ ವೇಳೆ ಅಭಿ,'ನಾನು ಊಟ ತರುತ್ತೇನೆ ನೀನು ಕೋಳಿ ಕಾಲು ಸುಟ್ಟಿರು' ಎಂದಿದ್ದಾನೆ. ಆದರೆ ಆತ ಮರಳಿ ಬರುವ ವೇಳೆಗೆ ಮಂಜು ಕೋಳಿ ಕಾಲು ಸುಡದೆ ಸುಮ್ಮನೆ ಕುಳಿತಿದ್ದ. ಇದರಿಂದಾಗಿ ಇಬ್ಬರ ನಡುವೆ ಜಗಳವಾಗಿದೆ.
ಈ ಜಗಳ ಮಿತಿಮೀರಿದ್ದು, ಅಭಿ ಬಳಿಯಲ್ಲಿದ್ದ ಕತ್ತಿಯಿಂದ ಮಂಜು ತಲೆಗೆ ಕಡಿದಿದ್ದಾನೆ. ತೀವ್ರ ರಕ್ತಸ್ರಾವದಿಂದಾಗಿ ಮಂಜು ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಪೆಟ್ರೋಲ್ ಹಾಕಿ ದೇಹ ಸುಟ್ಟ ಕೊಲೆಗಾರ!
ಮಂಜುವನ್ನು ಕತ್ತಿಯಿಂದ ಕಡಿದು ಕೊಲೆ ಮಾಡಿದ ಬಳಿಕ ಅಭಿ ದೇಹವನ್ನು ಪೆಟ್ರೋಲ್ ಹಾಕಿ ಕಾಫಿ ತೋಟದಲ್ಲೇ ಸುಟ್ಟು ಹಾಕಿದ್ದ. ಬಳಿಕ ಸುಟ್ಟು ಕರಕಲಾದ ದೇಹವನ್ನು ಹುಲ್ಲಿನಡಿಯಲ್ಲಿ ಮುಚ್ಚಿಟ್ಟು ಮನೆಗೆ ತೆರಳಿ ಮಲಗಿದ್ದ.ಮರುದಿನ ಮನೆಯವರು ಮಂಜುವಿಗಾಗಿ ಹುಡುಕಾಡಿ, ಬಳಿಕ ಪೊಲೀಸ್ ದೂರು ದಾಖಲಿಸಿದಾಗ ಅಸಲಿ ವಿಚಾರ ಬೆಳಕಿಗೆ ಬಂದಿದೆ.
ಆರೋಪಿಯನ್ನು ಪೊಲೀಸರು ಬಂಧಿಸಿದ್ದು, ಒಟ್ಟಾರೆಯಾಗಿ ಒಂದು ಕೋಳಿ ಕಾಲಿಗಾಗಿ ಕೊಲೆಯಾಗಿರುವುದು ವಿಪರ್ಯಾಸವೇ ಸರಿ.