ಮಂಗಳೂರು:ಇತ್ತೀಚಿನ ಆಧುನಿಕ ಕಾಲಘಟ್ಟದಲ್ಲಿ ಹಣದ ವ್ಯವಹಾರ, ಬ್ಯಾಂಕಿಂಗ್ ಸೇವೆಗಳು ಕೂಡಾ ಡಿಜಿಟಲೀಕರಣವಾಗಿ ಬಿಟ್ಟಿದೆ. ಸುಲಭವಾಗಿ ಮತ್ತು ಶೀಘ್ರವಾಗಿ ವ್ಯವಹಾರ ಮಾಡಲು ನಾವು ಸಾಮಾನ್ಯವಾಗಿ ಗೂಗಲ್ ಪೇ, ಫೋನ್ ಪೇ, ಸ್ಕ್ಯಾನರ್ ಕೋಡ್ ಗಳನ್ನು ಬಳಸುತ್ತೇವೆ. ಆದರೆ ಇಲ್ಲೊಬ್ಬ ಖದೀಮ ಅದರ ನೆಪದಲ್ಲೇ ಲಕ್ಷಾಂತರ ರೂ. ವಂಚಿಸಿದ ಘಟನೆ ಮಂಗಳೂರಿನಲ್ಲಿ ನಡೆದಿದೆ.
ಪೆಟ್ರೋಲ್ ಬಂಕ್ ಸೂಪರ್ ವೈಸರ್ ನಿಂದ ಲಕ್ಷಾಂತರ ರೂ. ಮೋಸ...!
ಪೆಟ್ರೋಲ್ ಬಂಕ್‌ನ ಸೂಪರ್‌ವೈಸರ್ ತನ್ನ ವೈಯಕ್ತಿಕ ಬ್ಯಾಂಕ್ ಖಾತೆಯ ಕ್ಯು ಆರ್ ಕೋಡ್ ಅನ್ನು ಹಾಕಿ ತಾನು ಕೆಲಸ ನಿರ್ವಹಿಸುತ್ತಿದ್ದ ಪೆಟ್ರೋಲ್ ಬಂಕ್‌ಗೆ 58.85 ಲಕ್ಷ ರೂ. ವಂಚಿಸಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ. ಬಂಗ್ರಕೂಳೂರಿನ ರಿಲಯನ್ಸ್ ಔಟ್‌ಲೆಟ್ ಫ್ಯುಯೆಲ್ ಬಂಕ್‌ನಲ್ಲಿ ಸೂಪರ್‌ವೈಸರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಮೋಹನದಾಸ್ ವಂಚನೆ ಪ್ರಕರಣದಲ್ಲಿ ಬಂಧಿತ ಆರೋಪಿಯಾಗಿದ್ದಾನೆ.
ಈತನೇ ಬಂಕ್ ನ ಹಣಕಾಸು ವ್ಯವಹಾರದ ಸಂಪೂರ್ಣ ನಿರ್ವಹಣೆಯ ಜವಾಬ್ದಾರಿಯನ್ನು ನಿಭಾಯಿಸುತ್ತಿದ್ದ. ಇದೇ ಮಾರ್ಗವನ್ನು ಸದಿಪಯೋಗಪಡಿಸಿಕೊಂಡು ಬಂಕ್ ಗೆ ಲಕ್ಷಾಂತರ ರೂ. ವಂಚನೆ ಮಾಡಿದ್ದಾನೆ.
ಗ್ರಾಹಕರಿಗೆ ಹಣ ಪಾವತಿಸಲು ಈತ ನೀಡುತ್ತಿದ್ದದ್ದು ತನ್ನ ಪರ್ಸನಲ್ ಖಾತೆಯ ಕ್ಯೂಆರ್ ಕೋಡ್..!!
ಈತ 2023ರ ಮಾರ್ಚ್ 1ರಿಂದ ಜು. 31ರವರೆಗೆ ಪೆಟ್ರೋಲ್ ಬಂಕ್‌ನಲ್ಲಿ ಬಂಕ್‌ನ ಕ್ಯುಆರ್ ಕೋಡ್ ತೆಗೆದು ತನ್ನ ವೈಯಕ್ತಿಯ ಖಾತೆಯ ಕ್ಯುಆರ್ ಕೋಡ್‌ನ್ನು ಅಳವಡಿಸಿದ್ದ.
ಗ್ರಾಹಕರಿಗೆ ಬಂಕ್‌ನದ್ದೇ ಕ್ಯುಆರ್ ಕೋಡ್ ಎಂದು ನಂಬಿಸಿ 58,85,333 ರೂ.ಗಳನ್ನು ವರ್ಗಾಯಿಸಿಕೊಂಡು ವಂಚಿಸಿದ್ದಾನೆ ಎಂದು ರಿಲಯನ್ಸ್ ಔಟ್‌ಲೆಟ್ ಫ್ಯುಯೆಲ್ ಬಂಕ್‌ನ ಮ್ಯಾನೇಜರ್ ನಗರದ ಸೆನ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಇದೀಗ ಆತನನ್ನು ಪೊಲೀಸರು ಬಂಧಿಸಿದ್ದು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.