ಮಂಗಳೂರು| ಮೆದುಳು ನಿಷ್ಕ್ರಿಯ..! ಎರಡು ಕಣ್ಣು, ಲಿವರ್ ದಾನ ಮಾಡಿ ಸಾರ್ಥಕತೆ ಮೆರೆದ ಮಹಿಳೆ...!!

  • 11 Jan 2025 03:32:04 PM

ಮಂಗಳೂರು: ಇತ್ತೀಚೆಗೆ ಜನರಲ್ಲಿ ಅಂಗಾಂಗ ದಾನ ಮಾಡುವುದರ ಬಗ್ಗೆ ಹೆಚ್ಚಿನ ಅರಿವನ್ನು ಮೂಡಿಸಲಾಗುತ್ತಿದೆ. ಅನೇಕ ಜನರು ಈ ಒಂದು ಉತ್ತಮ ಕಾರ್ಯಕ್ಕೆ ಎದುರು ಬರುತ್ತಿದ್ದಾರೆ. ಇದೀಗ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ  ಮೊದಲ ಬಾರಿಗೆ ಯಶಸ್ವಿಯಾಗಿ ಮಹಿಳೆಯೊಬ್ಬರ ಅಂಗಾಂಗ ದಾನ ಮಾಡಲಾಗಿದೆ. 

 

ಕಣ್ಣುಗಳು ಮತ್ತು ಲಿವರ್ ನ್ನು ದಾನ ಮಾಡಿ ಸಾರ್ಥಕತೆ ಮೆರೆದ ಮಹಿಳೆ...! 

 

ಮಿದುಳು ನಿಷ್ಕ್ರಿಯಗೊಂಡಿದ್ದ ಶಿವಮೊಗ್ಗದ ಮಹಿಳೆಯರೊಬ್ಬರ ಅಂಗಾಂಗ ದಾನ ಪ್ರಕ್ರಿಯೆ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ಶುಕ್ರವಾರ ನಡೆಯಿತು. ಶಿವಮೊಗ್ಗದ ರಾಗಿಗುಡ್ಡೆಯ ರೇಖಾ (41) ಎಂಬವರು ಮನೆಯಲ್ಲಿ ಕೆಲಸ ಮಾಡುತ್ತಿದ್ದ ವೇಳೆ ದಿಢೀರ್ ಅಸ್ವಸ್ಥಗೊಂಡಿದ್ದರು. ಅವರನ್ನು ಶಿವಮೊಗ್ಗ ಆಸ್ಪತ್ರೆಗೆ ದಾಖಲಿಸಿದಾಗ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ತೆರಳುವಂತೆ ವೈದ್ಯರು ಸಲಹೆ ನೀಡಿದ್ದಾರೆ. ನಂತರ ಹೆಚ್ಚಿನ ಚಿಕಿತ್ಸೆಗೆ ವೆನ್ಲಾಕ್ ಆಸ್ಪತ್ರೆಗೆ ಜ.6ರಂದು ಕರೆತರಲಾಗಿತ್ತು. ಈ ನಡುವೆ ಅವರ ಮಿದುಳು ನಿಷ್ಕ್ರಿಯಗೊಂಡಿದ್ದು ಕುಟುಂಬಸ್ಥರಿಗೆ ಈ ಬಗ್ಗೆ ಮಾಹಿತಿ ತಿಳಿಸಿಲಾಗಿದೆ. ನಂತರ ಅವರಿಗೆ ಅಂಗಾಂಗ ದಾನದ ಬಗ್ಗೆ ಅರಿವು ಮೂಡಿಸಲಾಯಿತು ಎಂದು ವೆನ್ಲಾಕ್ ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ. 

 

 ವೆನ್ಲಾಕ್ ಆಸ್ಪತ್ರೆಯಲ್ಲಿ ಇದೇ ಮೊದಲು..!

 

ವೆನ್ಲಾಕ್ ಸರ್ಕಾರಿ ಆಸ್ಪತ್ರೆಯ ವರ್ಷಗಳ ಇತಿಹಾಸದಲ್ಲಿ  ಇದೇ ಮೊದಲ  ಬಾರಿಗೆ ಅಂಗಾಂಗ ದಾನ ಪ್ರಕ್ರಿಯೆ ನಡೆದಿದೆ. ಮಹಿಳೆಯ ಎರಡು ಕಣ್ಣುಗಳನ್ನು ಮಂಗಳೂರಿನ ಕೆಎಂಸಿ ಆಸ್ಪತ್ರೆಗೆ ಹಾಗೂ ಲಿವರ್ ಅನ್ನು ಮೈಸೂರಿಗೆ ಝೀರೊ ಟ್ರಾಫಿಕ್ ನಲ್ಲಿ ಕೊಂಡೊಯ್ಯಲಾಯಿತು.

ಎಲ್ಲ ರೀತಿಯ ಪರೀಕ್ಷೆಗಳನ್ನು ಪೂರ್ಣಗೊಳಿಸಿ, ಮಿದುಳು ನಿಷ್ಕ್ರಿಯಗೊಂಡಿರುವುದನ್ನು ಖಚಿತಪಡಿಸಿಕೊಂಡ ಬಳಿಕವೇ ಈ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಲಾಯಿತು ಎಂದು ವೆನ್ಲಾಕ್ ಆಸ್ಪತ್ರೆಯ ಅಧೀಕ್ಷಕ ಡಾ. ಶಿವಪ್ರಕಾಶ್ ಮಾಹಿತಿ ನೀಡಿದ್ದಾರೆ.