ಬೀದರ್ : ಬೀದರ್ ನ ಗುತ್ತಿಗೆದಾರನಾಗಿದ್ದ ಸಚಿನ್ ಪಾಂಚಾಳನ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಪ್ರಿಯಾಂಕ್ ಖರ್ಗೆ ಅವರ ಆಪ್ತನನ್ನು ಸೇರಿ ಒಟ್ಟು ಐವರನ್ನು ಸಿಐಡಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಏನಿದು ಪ್ರಕರಣ..?
ಡಿ.26ರಂದು ಬೀದರ್ ಜಿಲ್ಲೆಯ ಭಾಲ್ಕಿ ತಾಲ್ಲೂಕಿನ ಕಟ್ಟಿತೂಂಗಾವ್ ಗ್ರಾಮದ ಗುತ್ತಿಗೆದಾರನಾಗಿದ್ದ ಸಚಿನ್ ಎಂಬಾತ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದ. ಕಾರಣ ಮಾತ್ರ ನಿಗೂಢವಾಗಿತ್ತು. ಆದರೆ ಆತ ಬರೆದಿಟ್ಟಿದ್ದ ಡೆತ್ ನೋಟ್ ನೋಡಿ ಪೊಲೀಸರು ತನಿಖೆಗಿಳಿದಿದ್ದರು.
ಆತ ಬರೆದಿಟ್ಟ ಡೆತ್ ನೋಟ್ ನಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಅವರ ಆಪ್ತ ರಾಜು ಕಪನೂರು ಸೇರಿದಂತೆ ಒಟ್ಟು ಎಂಟು ಜನರ ಹೆಸರನ್ನು ಉಲ್ಲೇಖ ಮಾಡಿದ್ದಾನೆ. ಈ ಹಿನ್ನೆಲೆ ಐವರನ್ನು ನಿನ್ನೆ ಸಿಐಡಿ ಪೊಲೀಸರು ಬಂಧಿಸಿದ್ದಾರೆ.
15 ಲಕ್ಷಕ್ಕೂ ಹೆಚ್ಚು ಹಣ ಪಡೆದು ಟೆಂಡರ್ ನೀಡದೆ ವಂಚನೆ ಆರೋಪ...!!
ಇವರು ಮೃತ ಗುತ್ತಿಗೆದಾರನಿಂದ 15ಲಕ್ಷಕ್ಕೂ ಹೆಚ್ಚು ಹಣವನ್ನು ಪಡೆದು ಟೆಂಡರ್ ನೀಡದೆ ಮೋಸ ಮಾಡಿದ್ದಾರೆ. ಅದರ ಜೊತೆಗೆ ಸುಮಾರು ಒಂದು ಕೋಟಿ ರೂ. ಹಣ ನೀಡದಿದ್ದರೆ ಕೊಲೆ ಮಾಡುವುದಾಗಿ ಕೂಡಾ ಬೆದರಿಕೆ ಹಾಕಿದ್ದಾರೆ. ಇದರಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಆಪ್ತನ ಪಾತ್ರ ಬಹು ದೊಡ್ಡದು ಎಂದು ಕೂಡಾ ಸ್ಪಷ್ಟವಾಗಿ ಸಚಿನ್ ತನ್ನ ಡೆತ್ ನೋಟ್ ನಲ್ಲಿ ಬರೆದಿಟ್ಟಿದ್ದ. ಈ ಹಿನ್ನೆಲೆ ಅವರನ್ನು ಕೂಡಾ ಬಂಧಿಸಲಾಗಿದೆ.
ಇದೀಗ ಈ ಪ್ರಕರಣ ರಾಜಕೀಯ ಸ್ವರೂಪವನ್ನು ಪಡೆದುಕೊಳ್ಳುತ್ತಿದ್ದು ಇದರಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಅವರ ಹೆಸರು ಕೇಳಿಬರುತ್ತಿದ್ದು ಬಿಜೆಪಿ ಪಕ್ಷ ಪ್ರಿಯಾಂಕ್ ಖರ್ಗೆ ಅವರ ರಾಜೀನಾಮೆಗೆ ಒತ್ತಾಯಿಸಿದೆ.