ಕಾಸರಗೋಡು|ಪುಟ್ಟ ಕಂದಮ್ಮನ ಜೀವಕ್ಕೆ ಮುಳುವಾಯ್ತು ಪಿಸ್ತಾ ಸಿಪ್ಪೆ...!! 2 ವರ್ಷದ ಕೂಸು ದುರಂತ ಅಂತ್ಯ..!

  • 13 Jan 2025 04:25:43 PM

ಕಾಸರಗೋಡು: ಪೋಷಕರಿಗೆ ಮಕ್ಕಳ ಮೇಲೆ ವಿಶೇಷವಾದ ಜವಾಬ್ದಾರಿ ಇರಬೇಕಾಗುತ್ತದೆ. ಕೇವಲ ಮಗು ಹೆತ್ತರಷ್ಟೇ ಸಾಲದು. ಅದರ ಪ್ರತಿಯೊಂದು ಹಂತದ ಜವಾಬ್ದಾರಿಯನ್ನು ಪೋಷಕರು ಕಟ್ಟುನಿಟ್ಟಿನಲ್ಲಿ ಪಾಲಿಸಬೇಕಾಗುತ್ತದೆ. ಇಲ್ಲವಾದಲ್ಲಿ ಯಾವುದಾದರೊಂದು ಸೂಕ್ಷ್ಮ ವಿಚಾರಗಳಲ್ಲಾದರೂ ಅಪಾಯ ಎದುರಾಗಬಹುದು. ಅದೇ ರೀತಿ ಸಣ್ಣ ಕಾರಣದಿಂದಾಗಿ ಎರಡು ವರ್ಷದ ಮಗು ದಾರುಣವಾಗಿ ಮೃತಪಟ್ಟ ಘಟನೆ ಕಾಸರಗೋಡಿನಲ್ಲಿ ನಡೆದಿದೆ. 

 

ಪಿಸ್ತಾ ಸಿಪ್ಪೆ ನುಂಗಿ ಅಸುನೀಗಿದ ಪುಟ್ಟ ಕೂಸು..!

 

ಎರಡು ವರ್ಷದ ಮಗುವೊಂದು ಪಿಸ್ತಾ ತಿನ್ನುತ್ತಿದ್ದಾಗ ಅದರ ಸಿಪ್ಪೆ ಗಂಟಲಿನಲ್ಲಿ ಸಿಲುಕಿಕೊಂಡ ಪರಿಣಾಮ ದಾರುಣವಾಗಿ ಮೃತಪಟ್ಟ ಘಟನೆ ಕಾಸರಗೋಡಿನ ಕುಂಬ್ಳೆಯಲ್ಲಿ ನಡೆದಿದೆ. ಅನ್ವರ್ ಮತ್ತು ಮೆಹರೂಫಾ ದಂಪತಿಯ ಪುತ್ರ ಅನಸ್ (2) ಮೃತಪಟ್ಟ ಬಾಲಕನಾಗಿದ್ದಾನೆ‌‌.

 

ಶನಿವಾರ ಮಧ್ಯಾಹ್ನ ಮಗು ಮನೆಯಲ್ಲಿ ಪಿಸ್ತಾ ತಿನ್ನುತ್ತಿತ್ತು. ಸಿಪ್ಪೆ ಸಹಿತ ತಿಂದಿದ್ದ ಪಿಸ್ತಾವನ್ನು ಮನೆಯವರು ನೋಡಿ ತಕ್ಷಣ ಮಗುವಿನ ಬಾಯಿಂದ ಅದನ್ನು ಹೊರತೆಗೆಯಲು ಪ್ರಯತ್ನಿಸಿದ್ದಾರೆ. ಗಂಟಲಿನಲ್ಲಿ ಇನ್ನೂ ಸಿಪ್ಪೆ ಹಾಗೇ ಉಳಿದುಕೊಂಡಿದೆಯೇ ಎಂದು ಪರೀಕ್ಷಿಸಲು ಮನೆಯವರು ಮಗುವನ್ನು ವೈದ್ಯರ ಬಳಿಗೆ ಕರೆದುಕೊಂಡು ಹೋಗಿದ್ದಾರೆ. ಆಗ ಪರೀಕ್ಷಿಸಿದ ವೈದ್ಯರು ಮಗುವಿನ ಗಂಟಲಿನಲ್ಲಿ ಏನೂ ಇಲ್ಲ. ಗಾಬರಿಯಾಗಬೇಡಿ..ತೊಂದರೆ ಇಲ್ಲ ಎಂದು ಹೇಳಿ ಕಳುಹಿಸಿದ್ದಾರೆ. ಹೀಗಾಗಿ ಮನೆಯವರು ಸಮಾಧಾನವಾಗಿದ್ದಾರೆ. 

 

ದಿಢೀರ್ ಉಸಿರಾಟ ತೊಂದರೆ ಕಾಣಿಸಿಕೊಂಡು ಮಗು ಸಾವು..!

 

ವೈದ್ಯರು ಪರೀಕ್ಷಿಸಿದ ಬಳಿಕ ಮನೆಗೆ ಬಂದ ಮಗುವಿಗೆ ಆದಿತ್ಯವಾರ ದಿಢೀರ್ ಉಸಿರಾಟ ತೊಂದರೆ ಕಾಣಿಸಿಕೊಂಡಿದ್ದು ಪೋಷಕರು ಮಗುವನ್ನು ಮಂಗಳೂರಿನ ಆಸ್ಪತ್ರೆಗೆ ಕೂಡಲೇ ಕೊಂಡೊಯ್ಯುವ ವ್ಯವಸ್ಥೆ ಮಾಡಿದ್ದಾರೆ. ಆದರೆ ದುರಾದೃಷ್ಟವಶಾತ್ ದಾರಿ ಮಧ್ಯೆಯೇ ಮಗು ಅಸುನೀಗಿದೆ. ಇದೀಗ ಎರಡು ವರ್ಷದ ಮಗುವನ್ನು ಕಳೆದುಕೊಂಡ ಮನೆಯವರು ದುಃಖದ ಕಡಲಿನಲ್ಲಿ ಮುಳುಗಿದ್ದಾರೆ.