ಸುಳ್ಯ: ಸಂಸಾರ ಎಂದ ಮೇಲೆ ಗಲಾಟೆ, ಮನಸ್ತಾಪ ಆಗೋದು ಸಹಜ. ಆದರೆ ಅದೆಲ್ಲವನ್ನು ಸಂಬಾಳಿಸಿಕೊಂಡು ಸಂಸಾರದ ಬಂಡಿಯನ್ನು ಸಾಗಿಸಬೇಕು. ಏಕೆಂದರೆ ಮನೆಯಲ್ಲಿ ದಂಪತಿಯ ಮಧ್ಯೆ ಗಲಾಟೆ ನಡೆದರೆ ಅದು ಮಕ್ಕಳ ಮೇಲೂ ಕೂಡಾ ಪರಿಣಾಮವನ್ನು ಬೀರಬಹುದು.
ಇತ್ತೀಚಿನ ದಿನಗಳಲ್ಲಿ ಅಂತೂ ಸಣ್ಣ ಸಣ್ಣ ವಿಚಾರಕ್ಕೂ ಮನೆ ಬಿಟ್ಟು ಹೋಗೋದು, ದುಡುಕಿನ ನಿರ್ಧಾರ ತೆಗೆದುಕೊಳ್ಳೋದು ಸಾಮಾನ್ಯವಾಗಿ ಬಿಟ್ಟಿದೆ. ಇದೀಗ ದ.ಕ ಜಿಲ್ಲೆಯ ಸುಳ್ಯದಲ್ಲೂ ಇಂತಹ ಘಟನೆಯೊಂದು ನಡೆದಿದೆ.
ಮಕ್ಕಳ ಜೊತೆ ನಾಪತ್ತೆಯಾದ ಗೃಹಿಣಿ..! ದೂರು ದಾಖಲು..!
ಗೃಹಿಣಿಯೊಬ್ಬರು ತನ್ನ ಇಬ್ಬರು ಹೆಣ್ಣು ಮಕ್ಕಳೊಂದಿಗೆ ನಾಪತ್ತೆಯಾದ ಘಟನೆ ಸುಳ್ಯದ ಅಲೆಟ್ಟಿ ಗ್ರಾಮದ ಪರಿವಾರಕಾನ ಎಂಬಲ್ಲಿ ನಡೆದಿದೆ. ಪರಿವಾರಕಾನ ನಿವಾಸಿ ನಂದಿನಿ (27ವರ್ಷ) ಮತ್ತು ಮಕ್ಕಳಾದ ವೈಷ್ಣವಿ (8ವರ್ಷ), ಅನುಷ್ಕಾ (2ವರ್ಷ) ನಾಪತ್ತೆಯಾಗಿರುವವರು.
ಈ ಬಗ್ಗೆ ಸುಳ್ಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಇವರ ಪತಿ ರಾಜೇಂದ್ರ ಟೈಲ್ಸ್ ಕೆಲಸ ನಿರ್ವಹಿಸುತ್ತಿದ್ದು ಪರಿವಾರಕಾನದಲ್ಲಿ ಕುಟುಂಬ ಸಮೇತರಾಗಿ ವಾಸಿಸುತ್ತಿದ್ದರು. ದೊಡ್ಡ ಮಗಳು ಅನುಷ್ಕಾ ಸೈಂಟ್ ಜೋಸೆಫ್ ಶಾಲೆಯಲ್ಲಿ ಕಲಿಯುತ್ತಿದ್ದಳು.
ಗಂಡ- ಹೆಂಡತಿ ಮಧ್ಯೆ ನಡೆದಿತ್ತು ಗಲಾಟೆ..!
ಒಂದು ವಾರದ ಹಿಂದೆ ಈ ದಂಪತಿ ಯಾವುದೋ ಕಾರಣಕ್ಕೆ ಕಿತ್ತಾಡಿಕೊಂಡಿದ್ದರು. ಆ ಸಂದರ್ಭ ನಂದಿನಿ ಅವರು ತನ್ನ ಮಕ್ಕಳೊಂದಿಗೆ ತಾಯಿ ಮನೆಗೆ ಹೋಗಿ ಬಂದಿದ್ದರು. ಆದರೆ ಮತ್ತೆ ಜ.7ರಂದು ಇವರು ತಮ್ಮ ಮಕ್ಕಳೊಂದಿಗೆ ಮತ್ತೆ ಕಾಣೆಯಾಗಿದ್ದಾರೆ.
ಈ ಬಗ್ಗೆ ಇವರ ಪತಿ ರಾಜೇಂದ್ರ ಅವರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ಶೋಧ ಕಾರ್ಯ ಆರಂಭಿಸಿದ್ದಾರೆ.