ಇತ್ತೀಚೆಗೆ ಮೋಸ್ಟ್ ವಾಂಟೆಡ್ ನಕ್ಸಲ್ ನಾಯಕ ವಿಕ್ರಂಗೌಡನ ಎನ್ಕೌಂಟರ್ ರಾಜ್ಯವನ್ನೇ ಬೆಚ್ಚಿಬೀಳಿಸಿತ್ತು. ಈ ಬಗ್ಗೆ ಅನೇಕ ಆರೋಪ- ಪ್ರತ್ಯಾರೋಪಗಳು ವ್ಯಕ್ತವಾಗಿತ್ತು. ನಂತರ ಮೊನ್ನೆ ತಾನೇ ಆದ ನಕ್ಸಲರ ಶರಣಾಗತಿ ಕೂಡಾ ಕಾಂಗ್ರೆಸ್ ಸರ್ಕಾರದ ಗಿಮಿಕ್ ಎಂದು ವಿರೋಧ ಪಕ್ಷಗಳು ವ್ಯಂಗ್ಯವಾಡಿದ್ದವು. ಇದೀಗ ವಿಕ್ರಂಗೌಡನ ಹತ್ಯೆಯ ಬಗ್ಗೆ ಆಶ್ಚರ್ಯಕರ ಸಂಗತಿಯೊಂದು ಬೆಳಕಿಗೆ ಬಂದಿದೆ.
ಎನ್ಕೌಂಟರ್ ಗೂ ಮೊದಲೇ ಸಂಧಾನಕ್ಕೆ ಒಪ್ಪಿದ್ದ ವಿಕ್ರಂ ಗೌಡ ಮತ್ಯಾಕೆ ಹತ್ಯೆಯಾದದ್ದು...?!
ಕರ್ನಾಟಕದಲ್ಲಿ ಮೊನ್ನೆ ತಾನೇ 6 ನಕ್ಸಲರ ಶರಣಾಗತಿ ನಡೆಯಿತು. ಇದರ ಹಿಂದೆ ದನ ಕಾಯುವ ಅಜ್ಜಿಯೊಬ್ಬರ ವಿಶೇಷವಾದ ಪಾತ್ರವಿದೆ. ವಿಕ್ರಂ ಗೌಡ ಎನ್‌ಕೌಂಟರ್‌ಗೂ ಮುನ್ನವೇ ಸಂಧಾನ ಪ್ರಕ್ರಿಯೆ ನಡೆದಿತ್ತು. ಆದರೂ, ಸಂಧಾನದ ಹಾದಿಯಲ್ಲಿದ್ದ ವಿಕ್ರಂಗೌಡನನ್ನು ನಕ್ಸಲ್ ನಿಗ್ರಹದಳದ ಸಿಬ್ಬಂದಿ ಬೇಕಂತಲೇ ಹೊಡೆದು ಉರುಳಿಸಿದ್ದಾರೆ ಎಂಬ ಅನುಮಾನಗಳು, ಆರೋಪಗಳು ವ್ಯಕ್ತವಾಗುತ್ತಿವೆ.
ಎಲ್ಲವನ್ನೂ ಬಿಟ್ಟು ಸಂಧಾನಕ್ಕಾಗಿ ಮುಂದೆ ಬಂದ ನಕ್ಸಲರ ಗುಂಪಿನ ಸದಸ್ಯ ವಿಕ್ರಂ ಗೌಡನನ್ನು ತಮ್ಮ ಶೌರ್ಯತನ ತೋರಿಸಲು, ತಾವು ಫೇಮಸ್ ಆಗಲು ಬೇಕಂತಲೇ ಎನ್‌ಕೌಂಟರ್ ಮಾಡಿ ಹೊಡೆದುರಿಳಿಸಲಾಗಿದೆ ಎಂಬ ಅನುಮಾನ ಮತ್ತಷ್ಟು ಎಲ್ಲರನ್ನು ಕಾಡುತ್ತಿದೆ. ಇದಕ್ಕೆ ಕಾರಣ ನಕ್ಸಲ್ ವಿಕ್ರಂ ಗೌಡನ ಎನ್‌ಕೌಂಟರ್‌ಗೂ 6 ತಿಂಗಳ ಹಿಂದೆಯೇ ಸಂಧಾನ ಕಾರ್ಯ ಶುರುವಾಗಿತ್ತು. ಅಜ್ಜಿ ಸಂಧಾನದ ಸುಳಿವು ಕೊಟ್ಟ ನಂತರವೂ, ಜೀವ ಭಯದ ಆತಂಕ ಬಿಟ್ಟು ನಾವು ಶರಣಾಗತಿ ಆಗುತ್ತೇವೆಂದು ವಿಕ್ರಂ ಗೌಡ ಕುಟುಂಬಕ್ಕೆ ತಿಳಿಸಲು ಬಂದಿದ್ದಾರೆ.
ಈ ವೇಳೆ ನಕ್ಸಲ್ ನಿಗ್ರಹದಳದ ಸಿಬ್ಬಂದಿ ಎನ್‌ಕೌಂಟರ್ ಮಾಡಿ ತಾವೇ ದೊಡ್ಡ ಸಾಧನೆ ಮಾಡಿದ್ದಾಗಿ ಬಿಂಬಿಸಿಕೊಂಡಿದ್ದಾರೆ. ಹೀಗಾಗಿ, ಸರ್ಕಾರಕ್ಕೆ ಶರಣಾದ 6 ಮಂದಿ ನಕ್ಸಲರು ಕೂಡ ವಿಕ್ರಂ ಗೌಡ ಎನ್‌ಕೌಂಟರ್ ಅನ್ನು ವಿಮರ್ಶೆ ಮಾಡಬೇಕು. ಇದರ ಹಿಂದಿನ ಕಾರಣವನ್ನು ಪತ್ತೆ ಹಚ್ಚಬೇಕು. ತನಿಖೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
ನಕ್ಸಲರು ಮತ್ತು ಸರ್ಕಾರದ ಮಧ್ಯೆ ಕೊಂಡಿಯಾಗಿ ಕೆಲಸ ಮಾಡಿದ ವೃದ್ಧೆ ಗೌರಮ್ಮ...!!
ಮೊನ್ನೆ ತಾನೇ ರಾಜ್ಯದಲ್ಲಿ ಆರು ಜನ ನಕ್ಸಲರು ಶರಣಾಗಲು ದನ ಕಾಯುವ ವೃದ್ಧೆಯ ಪಾತ್ರ ಬಹಳಷ್ಟಿದೆ. ಕಾಡಿನಲ್ಲಿ ದನ ಕಾಯುತ್ತಾ, ಸೌದೆ ತರಲು ಕಾಡಿಗೆ ಹೋಗಿದ್ದ ವೃದ್ಧೆ ಗೌರಮ್ಮನನ್ನು ಕಾಡಿನಲ್ಲಿ ನಕ್ಸಲರು ಭೇಟಿಯಾಗಿದ್ದಾರೆ. ವೃದ್ಧೆಯನ್ನು ಮಾತನಾಡಿಸಿದ ನಕ್ಸಲರು ನಿಮಗೊಂದು ಚೀಟಿ ಕೊಡ್ತೀವಿ, ಅದನ್ನು ಸರ್ಕಾರದ ಯಾವುದಾದರೂ ಅಧಿಕಾರಿಗಳಿಗೆ ಕೊಡ್ತೀರಾ ಎಂದು ಕೇಳಿದ್ದಾರೆ.
ಆಗ ನನಗೆ ಭಯ ಆಗುತ್ತೆ, ಇದೆಲ್ಲ ನನ್ನಿಂದ ಆಗುವಂತದ್ದಲ್ಲ ಎಂದು ವೃದ್ಧೆ ಗೌರಮ್ಮ ಹೇಳಿದ್ದಾರೆ. ಆದರೆ, ಅವರು ಮನವೊಲಿಸಿ ನಮ್ಮ ಜೀವ ಉಳಿಸುವ ಮಹಾತ್ಕಾರ್ಯ ನಿಮ್ಮಿಂದಾಗಲಿದೆ ಎಂದು ಹೇಳಿದ್ದಕ್ಕೆ ಅಜ್ಜಿ ತನ್ನ ಪ್ರಾಣ ಪಣಕ್ಕಿಟ್ಟು, ಅತ್ಯಂತ ದೊಡ್ಡ ಸವಾಲನ್ನು ಎದುರಿಸಿ ಸರ್ಕಾರ ಮತ್ತು ನಕ್ಸಲರ ಮಧ್ಯೆ ಕೊಂಡಿಯಾಗಿ ನಕ್ಸಲರ ಶರಣಾಗತಿಗೆ ಅತ್ಯದ್ಭುತ ಕೆಲಸ ಮಾಡಿದ್ದಾರೆ.
ಈ ಬಗ್ಗೆ ಸಂತೋಷವನ್ನು ವ್ಯಕ್ತಪಡಿಸಿದ ಅವರು `6 ಜನರ ಜೀವ ಉಳಿಸೋ ಕೆಲಸ ಮಾಡಿದ್ದೇನೆ ಎಂದು ಖುಷಿಯನ್ನು ವ್ಯಕ್ತಪಡಿಸಿ ಈಗ ನಕ್ಸಲರ ಸಮಸ್ಯೆ ಬಗೆಹರಿಯಿತು, ಆದರೆ ಜನರ ಸಮಸ್ಯೆ ಬಗೆಹರಿಯಲಿಲ್ಲ. ಅವರು ಹೊರಬಂದ ಮೇಲೆ ಜನರ ಪರ ಹೋರಾಟ ಮಾಡಬೇಕು. ನಮ್ಮ ಮನೆ ಸೇರಿ ನಮ್ಮ ಊರಿನ ಯಾರ ಮನೆಗೂ ಹಕ್ಕುಪತ್ರ ಇಲ್ಲ. ಇವೆಲ್ಲವೂ ಆಗೋದು ಯಾವಾಗ..? ಎಂದು ಶೃಂಗೇರಿ ತಾಲೂಕಿನ ಕಿಗ್ಗಾ ಸಮೀಪದ ಕಿತ್ತಲೆಮನೆ ಗ್ರಾಮದ ಗೌರಮ್ಮ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.