ಮಂಗಳೂರು: ಮನುಷ್ಯ ಹುಟ್ಟಿದ ಮೇಲೆ ಸಾವು ಅನ್ನೋದು ಸಹಜ. ಇದು ಯಾವಾಗ, ಯಾರಿಗೆ, ಹೇಗೆ ಬೇಕಾದರೂ ಸಂಭವಿಸಬಹುದು. ಸತ್ತ ವ್ಯಕ್ತಿಯನ್ನು ಬದುಕಿಸಲು ಬ್ರಹ್ಮನಿಂದಲೂ ಸಾಧ್ಯವಿಲ್ಲ. ಆಸ್ಪತ್ರೆಯಲ್ಲಿ ವೈದ್ಯರೂ ಕೂಡಾ ರೋಗಿಯ ಕೊನೇ ಕ್ಷಣದಲ್ಲಿ ನಮ್ಮ ಪ್ರಯತ್ನ ನಾವು ಮಾಡಿದ್ದೇವೆ.
ಇನ್ನು ದೇವರ ಇಚ್ಛೆ ಎಂದು ಹೇಳುತ್ತಾರೆ. ವ್ಯಕ್ತಿ ಮರಣ ಹೊಂದಿದಾಗ ಹೇಗಾದರೂ ಮರಳಿ ಬರಬಾರದೆ, ಈಗ ಏನಾದ್ರೂ ಪವಾಡ ನಡೆಯುತ್ತಿದ್ರೆ ಎಷ್ಟು ಒಳ್ಳೆದಿತ್ತು ಎಂದು ಆಲೋಚಿಸುತ್ತೇವೆ. ಆ ಆಲೋಚನೆಯೇ ದಿಢೀರ್ ವಾಸ್ತವವಾದರೆ ಹೇಗಿರುತ್ತೆ..? ಹೌದು ಅಂತಹುದೇ ಪವಾಡಸದೃಶ ಘಟನೆ ಇದೀಗ ಮಂಗಳೂರಿನಲ್ಲಿ ನಡೆದಿದೆ.
ಏನಿದು ಪ್ರಕರಣ...?
ಕಣ್ಣೂರಿನ ವೆಳ್ಳುವಕಂಡಿ ಪವಿತ್ರನ್ ಎಂಬವರು ನಿಮೊನಿಯಾ ಕಾಯಿಲೆಯಿಂದ ಬಳಲುತ್ತಿದ್ದರು. ಅವರನ್ನು ಚಿಕಿತ್ಸೆಗಾಗಿ ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆರೋಗ್ಯದಲ್ಲಿ ಏರುಪೇರು ಕಂಡುಬಂದ ಕಾರಣ ವೆಂಟಿಲೇಟರ್ ನಲ್ಲಿ ಇರಿಸಲಾಗಿತ್ತು.
ಅವರ ಆರೋಗ್ಯ ಸ್ಥಿತಿ ಸಂಪೂರ್ಣವಾಗಿ ಹದಗೆಟ್ಟಿದ್ದರಿಂದ ವೆಂಟಿಲೇಟರ್ ನಿಂದ ತೆಗೆದುಬಿಡುವುದು ಒಳ್ಳೆಯದು ಎಂದು ವೈದ್ಯರು ತಿಳಿಸಿದ್ದಾರೆ. ಸಂಜೆ ಹೊತ್ತಿಗೆ ಇವರು ನಿಧನರಾಗಿದ್ದಾರೆ ಎಂದು ವೈದ್ಯರು ಘೋಷಿಸಿದ್ದಾರೆ. ಶವವನ್ನು ಆ್ಯಂಬುಲೆನ್ಸ್ ನಲ್ಲಿ ಕಣ್ಣೂರಿಗೆ ಕಳುಹಿಸಲು ಸೂಕ್ತ ವ್ಯವಸ್ಥೆ ಏರ್ಪಾಡು ಮಾಡಲಾಗಿದೆ.
ಆದರೆ ರಾತ್ರಿ ತಡವಾದ ಕಾರಣ ಶವವನ್ನು ಕಣ್ಣೂರು ಆಸ್ಪತ್ರೆಯ ಶವಾಗಾರದಲ್ಲಿ ಇಟ್ಟು ಮರುದಿನ ಅಂತ್ಯಸಂಸ್ಕಾರ ಮಾಡುವಂತೆ ಕುಟುಂಬಸ್ಥರು ನಿರ್ಧರಿಸಿದ್ದಾರೆ.
ಶವಾಗಾರಕ್ಕೆ ಸಾಗಿಸುವಾಗಲೇ ಶವದ ಕೈಗಳಲ್ಲಿ ಚಲನೆ, ಸಿಬ್ಬಂದಿ ಶಾಕ್...!!
ಶವವನ್ನು ಶವಾಗಾರಕ್ಕೆ ಸಾಗಿಸುತ್ತಿದ್ದಾಗ ಪವಿತ್ರನ್ ಅವರ ಕೈ ಅಲುಗಾಡುವುದನ್ನು ಗಮನಿಸಿದ ಸಿಬ್ಬಂದಿ ಗಮನಿಸಿ ತನ್ನ ಸಹೋದ್ಯೋಗಿ ಜೊತೆ ತಿಳಿಸಿದ್ದಾನೆ. ವಿಚಾರ ತಿಳಿಯುತ್ತಿದ್ದಂತೆ ಆಸ್ಪತ್ರೆಯ ವೈದ್ಯಕೀಯ ತಂಡ ದೇಹ ಪರೀಕ್ಷಿಸಿ ಇವರು ಜೀವಂತವಾಗಿರುವುದನ್ನು ಸ್ಪಷ್ಟನೆ ನೀಡಿದ್ದಾರೆ.
ಹೆಚ್ಚಿನ ಚಿಕಿತ್ಸೆಗಾಗಿ ಇವರನ್ನು ಐಸಿಯುಗೆ ಶಿಫ್ಟ್ ಮಾಡಲಾಗಿದ್ದು ಇದೀಗ ಇವರು ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ. ಮಂಗಳೂರು ಆಸ್ಪತ್ರೆಯಲ್ಲಿ ಇವರು ಮೃತಪಟ್ಟಿದ್ದಾರೆ ಎಂದು ಘೋಷಿಸಿರುವುದರ ಬಗ್ಗೆ ಇದೀಗ ಹಲವು ಪ್ರಶ್ನೆಗಳು ಕಾಡುತ್ತಿದ್ದು ಆಸ್ಪತ್ರೆಯ ವಿರುದ್ಧ ದೂರು ನೀಡುವುದಾಗಿ ಕುಟುಂಬದ ಮೂಲಗಳು ತಿಳಿಸಿವೆ.