ಗುಜರಾತ್: ಸರ್ಕಾರಿ ಅಧಿಕಾರಿಗಳು ಅಂದ ಮೇಲೆ ಲಂಚ ತೆಗೆದುಕೊಳ್ಳದೆ ಯಾವುದೇ ಕೆಲಸವನ್ನು ಮಾಡಿಕೊಡುವುದಿಲ್ಲ. ದಾಖಲೆಗಾಗಿ ಕಚೇರಿ ಕಚೇರಿ ಅಲೆದಾಡಬೇಕಾಗುತ್ತದೆ. ಕೆಲವು ಅಧಿಕಾರಿಗಳಂತೂ ಬೇಡಿಕೆಯಿಟ್ಟಷ್ಟು ಲಂಚ ಬಂದರೆ ಮಾತ್ರ ಕೆಲಸವನ್ನು ಶೀಘ್ರಗತಿಯಲ್ಲಿ ಮಾಡಿ ಕೊಡುತ್ತಾರೆ.
ಅದೇ ರೀತಿ ಇಲ್ಲೊಬ್ಬ ಅಧಿಕಾರಿಯ ಹಣದಾಹಕ್ಕೆ ಬೇಸತ್ತು ಜನರು ಅವನ ಮೇಲೆ ಹಣ ಎಸೆದು ಆಕ್ರೋಶವನ್ನು ವ್ಯಕ್ತಪಡಿಸಿದ ವೀಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.
ಕೆಲಸ- ಕಾರ್ಯಕ್ಕೆ ಕಚೇರಿಗೆ ಹೋದ್ರೆ ಲಂಚಕ್ಕೆ ಡಿಮ್ಯಾಂಡ್..!
ಗುಜರಾತಿನ ಒಂದು ಸರ್ಕಾರಿ ಕಚೇರಿಯಲ್ಲಿ ಅಧಿಕಾರಿಯೊಬ್ಬ ಜನಸಾಮಾನ್ಯರಲ್ಲಿ ಲಂಚಕ್ಕೆ ಬೇಡಿಕೆಯಿಡುತ್ತಾ ಕೆಲಸವನ್ನು ಮಾಡಿಕೊಡಲು ಹಿಂದೇಟು ಹಾಕುತ್ತಿದ್ದ. ಭ್ರಷ್ಟ ಅಧಿಕಾರಿಯ ಕಾಟ ತಾಳಲಾರದೆ ಊರಿನ ಜನರು ಒಟ್ಟಾಗಿ ಆತನನ್ನು ಬೆಂಡೆತ್ತಿದ್ದಾರೆ.
ಕೂತರೂ ನಿಂತರೂ ಈತ ಡಿಮ್ಯಾಂಡ್ ಮಾಡುವ ಹಣ ಹೊಂದಿಸಲಾಗದೆ ಜನಸಾಮಾನ್ಯರು ನರಕ ಅನುಭವಿಸುತ್ತಿದ್ದು ಎಲ್ಲರೂ ಆತನ ಕಚೇರಿಯಲ್ಲಿ ಆಕ್ರೋಶವನ್ನು ಹೊರ ಹಾಕಿ ಆತನ ಮೇಲೆ ಹಣದ ಮಳೆಗರೆದಿದ್ದಾರೆ.
ವೈರಲ್ ಆದ ವೀಡಿಯೋದಲ್ಲಿ ಏನಿದೆ..?
ಈ ಘಟನೆ ನಡೆದದ್ದು ಗುಜರಾತ್ ನಲ್ಲಿ. ಇಲ್ಲಿನ ಸರಕಾರಿ ಕಚೇರಿಯಲ್ಲಿರುವ ಅಧಿಕಾರಿಯೊಬ್ಬರು ತಮ್ಮ ಸರ್ಕಾರಿ ಕೆಲಸ ಕಾರ್ಯಗಳಿಗಾಗಿ ಬಂದ ಜನರಲ್ಲಿ ಲಂಚಕ್ಕೆ ಡಿಮ್ಯಾಂಡ್ ಮಾಡುತ್ತಿದ್ದನಂತೆ. ಇದರಿಂದ ಬೇಸತ್ತ ಜನ ಒಗ್ಗಟ್ಟಾಗಿ ಸರಕಾರಿ ಕಚೇರಿಗೆ ಬಂದು ಕುತ್ತಿಗೆಗೆ ಘೋಷಣೆಗಳ ನಾಮಫಲಕವನ್ನು ನೇತು ಹಾಕಿಸಿಕೊಂಡು ಅಧಿಕಾರಿಯನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ.
ವಿಡಿಯೋ ದಲ್ಲಿ ಜನರು ಅಧಿಕಾರಿಯನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದಂತೆ ಅಧಿಕಾರಿ ಕೈ ಮುಗಿದು ಕುಳಿತಿರುವುದು ಕಂಡುಬಂದಿದೆ. ಜೊತೆಗೆ ಸೇರಿದ್ದ ಜನ ಗುಜರಾತಿ ಭಾಷೆಯಲ್ಲಿ ಅಧಿಕಾರಿಯನ್ನು ತರಾಟೆಗೆ ತಗೆದುಕೊಂಡಿರುವುದು ಕಾಣಬಹುದು. ಅಲ್ಲದೆ ಜನರು ತಂದಿರುವ ಕಂತೆ ಕಂತೆ ಹಣವನ್ನು ಭ್ರಷ್ಟ ಅಧಿಕಾರಿಯ ಮೇಲೆ ಸುರಿಯುತ್ತಿರುವುದು ಕೂಡಾ ಸ್ಪಷ್ಟವಾಗಿ ಕಾಣಬಹುದು.
ಆದರೆ ಇದು ಯಾವ ಸರಕಾರಿ ಕಚೇರಿಯಲ್ಲಿ ನಡೆದಿರುವುದು ಎಂಬುದು ಮಾತ್ರ ಸ್ಪಷ್ಟ ಇಲ್ಲ, ವಿಡಿಯೋ ಮಾತ್ರ ವೈರಲ್ ಆಗುತ್ತಿದೆ.