ಮಂಗಳೂರು: ನಿನ್ನೆಯಷ್ಟೇ ಉಳ್ಳಾಲದ ಕೋಟೆಕಾರ್ ನ ಬ್ಯಾಂಕ್ ಒಂದರಲ್ಲಿ ನಡೆದ ದರೋಡೆ ಪ್ರಕರಣ ಎಲ್ಲರನ್ನೂ ಬೆಚ್ಚಿ ಬೀಳಿಸಿತ್ತು. ಕೋಟೆಕಾರ್ ಸೇವಾ ಸಹಕಾರಿ ಬ್ಯಾಂಕ್ ನಲ್ಲಿ ಚಿನ್ನ ಹಾಗೂ ನಗದು ಸಹಿತ ಒಟ್ಟು ಹನ್ನೆರಡು ಕೋಟಿಯಷ್ಟು ದೋಚಿಕೊಂಡು ದರೋಡೆಕೋರರು ಎಸ್ಕೇಪ್ ಆಗಿದ್ದು ಈ ಪ್ರಕರಣಕ್ಕೆ ಸಂಬಂಧಿಸಿ ಸ್ಥಳೀಯರು ಕಕ್ಕಾಬಿಕ್ಕಿಯಾಗಿದ್ದಾರೆ. ಇದೀಗ ಈ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು ಪೊಲೀಸರು ಮಾಹಿತಿಯನ್ನು ಕಲೆ ಹಾಕಿದ್ದಾರೆ.
ಕಾರಿಗೆ ಫೇಕ್ ನಂಬರ್ ಪ್ಲೇಟ್ ಅಳವಡಿಸಿದ್ದ ಖದೀಮರು..!
ಬ್ಯಾಂಕ್ ನಲ್ಲಿ ದರೋಡೆ ಮಾಡಲು ಖತರ್ನಾಕ್ ಪ್ಲ್ಯಾನ್ ಮಾಡಿಕೊಂಡಿದ್ದ ಖದೀಮರು ತಮ್ಮ ಕಾರಿಗೆ ಕೂಡಾ ಫೇಕ್ ನಂಬರ್ ಪ್ಲೇಟ್ ಅಳವಡಿಸಿದ್ದರು. ಅವರ ಕಾರಿಗೆ KA04MQ9923 ಎಂಬ ನಕಲಿ ನಂಬರ್ ಪ್ಲೇಟ್ ಹಾಕಿಕೊಂಡಿದ್ದಾರೆ.
ಇದರ ಮಾಹಿತಿ ಕಲೆ ಹಾಕಿದ ಪೊಲೀಸರಿಗೆ ಶಾಕ್ ಆಗಿದೆ. ಈ ಕಾರ್ ನ ನಿಜವಾದ ಮಾಲೀಕನಿಗೆ ಕಾಲ್ ಮಾಡಿದಾಗ ಅವನೂ ಕಕ್ಕಾಬಿಕ್ಕಿಯಾಗಿದ್ದಾನೆ. ಇದೀಗ ಆರೋಪಿಗಳು ಕಾರಿನಲ್ಲಿ ಕೇರಳದ ಕಡೆ ಎಸ್ಕೇಪ್ ಆಗಿದ್ದು ಶೋಧ ಕಾರ್ಯ ನಡೆಸಲು ಪೊಲೀಸರು ಎರಡು ತಂಡ ರಚನೆ ಮಾಡಿ ಕಾಸರಗೋಡಿನತ್ತ ಪ್ರಯಾಣ ಬೆಳೆಸಿದ್ದಾರೆ.
12 ಕೋಟಿಯಷ್ಟು ಚಿನ್ನ ಬಿಟ್ಟು ಹೋದ ಖತರ್ನಾಕ್ ಕಳ್ಳರು..!!
ಬ್ಯಾಂಕಿಗೆ ಆಗಮಿಸಿದ್ದ ಖದೀಮರು 6 ನಿಮಿಷದಲ್ಲೇ 12 ಕೋಟಿಯಷ್ಟು ಚಿನ್ನ, ನಗದು ಹಣವನ್ನು ನಾಲ್ಕೈದು ಚೀಲದಲ್ಲಿ ತುಂಬಿಸಿಕೊಂಡು ಹೋಗಿದ್ದಾರೆ. ಆದರೆ ಆತುರದಲ್ಲಿ ಸ್ಥಳದಿಂದ ಪಲಾಯನಗೊಳ್ಳುವ ಸಂದರ್ಭ ಸುಮಾರು 6 ಕೋಟಿ ಮೌಲ್ಯದಷ್ಟು ಚಿನ್ನವನ್ನು ಬಿಟ್ಟು ಹೋಗಿದ್ದಾರೆ.
ಪೊಲೀಸರ ಕೈಯಲ್ಲಿ ಸಿಕ್ಕಿಬೀಳುವ ಆತಂಕದಿಂದ ಅಥವಾ ಭಾರವಾಗುತ್ತೆ ಅನ್ನೋ ಕಾರಣದಿಂದಲೋ ಏನೋ ಖದೀಮರು ಚಿನ್ನವನ್ನು ಅಲ್ಲೇ ಉಳಿಸಿ ಹೋಗಿದ್ದಾರೆ. ಇನ್ನು ಈ ಬ್ಯಾಂಕ್ ನಲ್ಲಿ ಠೇವಣಿ ಇಟ್ಟ ಗ್ರಾಹಕರು ದಿಗಿಲುಗೊಂಡಿದ್ದಾರೆ. ಇದಕ್ಕೆ ಬ್ಯಾಂಕ್ ನ ಅಧ್ಯಕ್ಷ ಹೇಳಿಕೆ ನೀಡಿದ್ದು ಗ್ರಾಹಕರು ಏನೂ ಆತಂಕ ಪಡುವ ಅಗತ್ಯವಿಲ್ಲ. ಗ್ರಾಹಕರಿಗೆ ಅವರವರ ಮೊತ್ತ ಸಿಗಲಿದೆ' ಎಂದು ಭರವಸೆಯನ್ನು ನೀಡಿದ್ದಾರೆ.