ನಂಜನಗೂಡು: ಇತ್ತೀಚಿನ ದಿನಗಳಲ್ಲಿ ಜನರಲ್ಲಿ ಮಾನವೀಯತೆ ಅನ್ನುವಂತದ್ದು ಕಳೆದುಹೋಗಿದೆ. ಮನುಷ್ಯರೂ ಮೃಗಗಳಂತೆ ವರ್ತಿಸುತ್ತಾ ಕ್ರೌರ್ಯತೆ ಮೆರೆದು ಅದರಲ್ಲೂ ತುಚ್ಛ ಸಂತೋಷವನ್ನು ಅನುಭವಿಸುತ್ತಿದ್ದಾರೆ.
ಮೊನ್ನೆ ತಾನೇ ಬೆಂಗಳೂರಿನಲ್ಲಿ ಹಸುವಿನ ಕೆಚ್ಚಲು ಕೊಯ್ದು ವಿಕೃತಿ ಮೆರೆದ ಪ್ರಕರಣ ಮಾಸುವ ಮುನ್ನವೇ ನಂಜನಗೂಡಿನಲ್ಲಿ ಮತ್ತೊಂದು ಹೃದಯವಿದ್ರಾವಕ ಘಟನೆ ನಡೆದಿದೆ.
ಹರಕೆಗೆ ಬಿಟ್ಟ ಗೂಳಿಯ ಬಾಲ ಕತ್ತರಿಸಿದ ಕಿಡಿಗೇಡಿಗಳು..!
ನಂಜನಗೂಡಿನ ಶ್ರೀ ಕಂಠೇಶ್ವರ ದೇಗುಲದ ಬಳಿಯ ಹಳ್ಳದಕೆರೆಯಲ್ಲಿ ಹರಕೆಗೆ ಬಿಟ್ಟ ಗೂಳಿಯ ಬಾಲವನ್ನು ದುಷ್ಕರ್ಮಿಗಳು ಕಡಿದು ಹಾಕಿದ್ದಾರೆ. ಗಾಯಗೊಂಡಿರುವ ಕರುವಿಗೆ ಚಿಕಿತ್ಸೆ ನೀಡಲಾಗುತ್ತಿದೆ.
ಘಟನೆಯ ಬಗ್ಗೆ ಸ್ಥಳೀಯರು ಆಕ್ರೋಶವನ್ನು ವ್ಯಕ್ತಪಡಿಸಿದ್ದು ಕಿಡಿಗೇಡಿಗಳಿಗೆ ಕಠಿಣ ಶಿಕ್ಷೆ ಆಗುವಂತೆ ಸೂಕ್ತ ಕ್ರಮಕ್ಕೆ ಒತ್ತಾಯಿಸಿದ್ದಾರೆ. ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಹೋರಿಯ ಕೂಗು ಕೇಳಿ ಸ್ಥಳಕ್ಕೆ ಓಡಿ ಬಂದ ಗ್ರಾಮಸ್ಥರು...!!
ಕೃತ್ಯವೆಸಗಿದಾಗ ಹರಕೆ ಹೋರಿಯು ಜೋರಾಗಿ ರೋದಿಸಿದೆ. ಕೂಡಲೇ ಸ್ಥಳೀಯರು ಸ್ಥಳಕ್ಕೆ ಓಡಿ ಬಂದು ಪಶುವೈದ್ಯರಿಗೆ ಮಾಹಿತಿ ನೀಡಿದ್ದಾರೆ. ದುಷ್ಕರ್ಮಿಗಳು ಅದರ ಬಾಲವನ್ನು ಕತ್ತರಿಸಿ ವಿಕೃತಿ ಮೆರೆದಿರುವುದು ನೋಡಿ ಜನ ದಿಗ್ಭ್ರಮೆಗೊಂಡಿದ್ದಾರೆ.
ಪೊಲೀಸರು ದುಷ್ಕರ್ಮಿಗಳನ್ನು ಪತ್ತೆ ಹಚ್ಚಲು ಎರಡು ತಂಡವನ್ನು ರಚಿಸಿದ್ದಾರೆ. ಹೋರಿ ಅಪಾಯದಿಂದ ಬಚಾವಾಗಿದ್ದು ಚೇತರಿಸಿಕೊಳ್ಳುತ್ತಿದೆ ಎಂದು ವೈದ್ಯರು ತಿಳಿಸಿದ್ದಾರೆ.