ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದ ಗದ್ದುಗೆಯೇರಿದ ಮೇಲೆ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ. ಅತ್ಯಾಚಾರ, ಕೊಲೆ- ದರೋಡೆ ಪ್ರಕರಣಗಳು, ಅಕ್ರಮ ಮರಳು, ಗಾಂಜಾ ಸಾಗಾಟ ಮುಂತಾದ ಕಾನೂನು ಉಲ್ಲಂಘಿತ ವ್ಯವಹಾರ ಏನೂ ಭಯವಿಲ್ಲದೆ ಲೀಲಾಜಾಲವಾಗಿ ಸಾಗುತ್ತಿದೆ. ಇದರ ಬಗ್ಗೆ ವಿರೋಧ ಪಕ್ಷವಾದ ಬಿಜೆಪಿ ಟೀಕೆಯನ್ನು ಮಾಡುತ್ತಲೇ ಇರುತ್ತದೆ. ಇದೀಗ ಮತ್ತೆ ಕಾಂಗ್ರೆಸ್ ಸರ್ಕಾರವನ್ನು ಟೀಕಿಸಲು ಬಿಜೆಪಿಗೆ ಆಹಾರ ಸಿಕ್ಕಿದಂತಾಗಿದೆ.
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹಾಳಾಗಿದೆ ಅನ್ನೋದಕ್ಕೆ ಕೋಟೆಕಾರ್ ಪ್ರಕರಣವೇ ಸಾಕ್ಷಿ- ವಿಜಯೇಂದ್ರ...!
ಕರ್ನಾಟಕದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹಾಳಾಗಿದ್ದು ಅರಾಜಕತೆ ಉಂಟಾಗಿರುವುದನ್ನು ಸಾಕ್ಷೀಕರಿಸುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ರಾಜ್ಯ ಸರ್ಕಾರದ ವಿರುದ್ಧ ಸಿಡಿಮಿಡಿಗೊಂಡಿದ್ದಾರೆ. ದಕ್ಷಿಣ ಕನ್ನಡದ ಉಳ್ಳಾಲದಲ್ಲಿ ನಡೆದ ದರೋಡೆ ಪ್ರಕರಣ ಕುರಿತು ತಮ್ಮ ಎಕ್ಸ್ ಖಾತೆಯಲ್ಲಿ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಕಾಂಗ್ರೆಸ್ ಸರ್ಕಾರದ ಆಡಳಿತ ವೈಫಲ್ಯದ ಬಗ್ಗೆ ಎಕ್ಸ್ ನಲ್ಲಿ ಟ್ವೀಟ್...!!
ಕರ್ನಾಟಕವೆಂದರೆ ಮಾಫಿಯಾಗಳು, ಅಕ್ರಮ ವ್ಯವಹಾರಗಳು, ಅತ್ಯಾಚಾರಿಗಳು, ಡಕಾಯಿತರು ಹಾಗೂ ಭಯೋತ್ಪಾದಕರಿಗೆ ಸೇಫ್ ಝೋನ್ ಎಂಬ ಸಂದೇಶ ರವಾನೆಯಾಗುತ್ತಿರುವುದು ಕಾಂಗ್ರೆಸ್ ಸರ್ಕಾರದ ಆಡಳಿತದ ವೈಫಲ್ಯವನ್ನು ಎತ್ತಿ ತೋರಿಸುತ್ತದೆ.
ಕರ್ನಾಟಕ ಈಗೀಗ ರಕ್ಕಸರ ತವರೂರಾಗುತ್ತಿದೆ, ಕ್ರಿಮಿನಲ್ ಕರ್ನಾಟಕ ಎಂಬ ಅಪಕೀರ್ತಿ ಪಡೆದುಕೊಳ್ಳುತ್ತಿದೆ’ ಎಂಬ ಆತಂಕ ಜನರನ್ನು ಕಾಡುತ್ತಿದೆ. ಇಂತಹ ಅವಮಾನವನ್ನು ಎದುರಿಸಲು ಕನ್ನಡಿಗರು ಸಿದ್ಧರಿಲ್ಲ. ಒಂದರಮೇಲೊಂದು ಕ್ರಿಮಿನಲ್ ಪ್ರಕರಣಗಳು ದಾಖಲಾಗುತ್ತಿವೆ. ಅತ್ಯಾಚಾರ, ಗುಂಡಾಗಿರಿ, ಕೊಲೆ, ದರೋಡೆ ಮೊದಲಾದ ಚಟುವಟಿಕೆಗಳು ನಿರಂತರ ನಡೆಯುತ್ತಿದ್ದರೂ ರಾಜ್ಯದ ಕಾಂಗ್ರೆಸ್ ಸರ್ಕಾರ ನಿದ್ದೆ ಮಾಡಿಕೊಂಡು ಕೂತಿದೆ.
ತಮ್ಮ ಹಣ ಚಿನ್ನ ಹಾಗೂ ಇತರ ಆಸ್ತಿಗಳಿಗೆ ಬ್ಯಾಂಕ್ ಸುರಕ್ಷಿತ ಅಂತ ನಂಬುವ ಹಾಗೂ ಇಲ್ಲ. ಬ್ಯಾಂಕುಗಳಿಗೇ ರಕ್ಷಣೆ ನೀಡಲಾಗದ ಸರ್ಕಾರ ಜನಸಾಮಾನ್ಯರ ಪ್ರಾಣ ಹಾಗೂ ಆಸ್ತಿಗೆ ರಕ್ಷಣೆ ನೀಡಲು ಸಾಧ್ಯವೇ ? ಎಂದು ನಾಗರೀಕರು ಪ್ರಶ್ನಿಸುತ್ತಿದ್ದಾರೆ. ಮುಖ್ಯಮಂತ್ರಿಗಳು ಈ ಕೂಡಲೇ ಗೃಹ ಇಲಾಖೆಯ ಮೇಲೆ ನಿಯಂತ್ರಣ ಸಾಧಿಸಿ ಪರಿಣಾಮಕಾರಿ ಕ್ರಮಗಳನ್ನು ಕೈಗೊಂಡು ಜನರಲ್ಲಿ ರಕ್ಷಣೆಯ ಅಭಯ ನೀಡುವ ಹೆಜ್ಜೆಗಳನ್ನಿಡಲೇಬೇಕಿದೆ.
ಈ ನಿಟ್ಟಿನಲ್ಲಿ ತಮ್ಮ ಉದಾಸೀನತೆಯನ್ನು ಮುಂದುವರೆಸಿದರೆ ಜನತೆ ತಮ್ಮನ್ನು ರಕ್ಷಿಸಿಕೊಳ್ಳಲು ಈ ಸರ್ಕಾರವನ್ನು ಅಧಿಕಾರದಿಂದ ಕೆಳಗಿಳಿಸಲು ಹೋರಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಎಚ್ಚೆತ್ತುಕೊಳ್ಳಿ' ಎಂದು ಖಡಕ್ ಆಗಿ ಎಚ್ಚರಿಕೆಯನ್ನು ನೀಡಿದ್ದಾರೆ.