*ಮಂಗಳೂರು|ಕೋಟೆಕಾರ್ ಬ್ಯಾಂಕ್ ದರೋಡೆ ಪ್ರಕರಣ...! ಮುಂಬೈ ಗ್ಯಾಂಗ್ ಗೆ ಸೇರಿದ ಮೂರು ಖದೀಮರಿಗೆ ಬಲೆ ಬೀಸಿದ ಪೊಲೀಸರು...!!*

  • 21 Jan 2025 04:02:07 PM

ಮಂಗಳೂರು: ಮೊನ್ನೆ ತಾನೇ ದ.ಕ ಜಿಲ್ಲೆಗೆ ಸಿಎಂ ಸಿದ್ಧರಾಮಯ್ಯನವರು ಆಗಮಿಸಿದ್ದ ಸಂದರ್ಭವನ್ನು ಬಂಡವಾಳ ಮಾಡಿಕೊಂಡು ಖದೀಮರು ಕೋಟೆಕಾರ್ ಸಹಕಾರಿ ಬ್ಯಾಂಕ್ ನ ಕೋಟ್ಯಾಂತರ ರೂ. ನಗದು, ಚಿನ್ನವನ್ನು ಲಪಟಾಯಿಸಿದ ಪ್ರಕರಣ ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿತ್ತು. ಇದೀಗ ಆ ಪ್ರಕರಣಕ್ಕೆ ಹೊಸದೊಂದು ಟ್ವಿಸ್ಟ್ ಸಿಕ್ಕಿದೆ. 

 

ತಮಿಳುನಾಡಿನಲ್ಲಿ ಪೊಲೀಸರ ಕೈಗೆ ಸಿಕ್ಕಿದ ಆರೋಪಿಗಳು‌..!

 

ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮೂವರನ್ನು ಬಂಧಿಸಿದ್ದಾರೆ. ಮುಂಬೈ ಗ್ಯಾಂಗ್‌ಗೆ ಸೇರಿದ್ದ ದರೋಡೆಕೋರರನ್ನು ಇವರಾಗಿದ್ದು ಇವರನ್ನು ತಮಿಳುನಾಡಿನ ಮಧುರೈ ಬಳಿ ಬಂಧಿಸಲಾಗಿದೆ. ಮುರುಗಂಡಿ ದೇವರ್, ಪ್ರಕಾಶ್ ಅಲಿಯಾಸ್‌ ಜೋಶ್ವಾ, ಮನಿವೆನನ್ ಬಂಧಿತ ಆರೋಪಿಗಳಾಗಿದ್ದಾರೆ. ಬಂಧಿತರಿಂದ ಫಿಯಟ್ ಕಾರು ಹಾಗೂ 2 ಗೋಣಿ ಚೀಲವನ್ನ ವಶಕ್ಕೆ ಪಡೆಯಲಾಗಿದೆ ಎಂದು ಮಂಗಳೂರು ಪೊಲೀಸ್ ಆಯುಕ್ತ ಅನೂಪ್‌ಕುಮಾರ್ ಮಾಹಿತಿ ನೀಡಿದ್ದಾರೆ.

 

ಖತರ್ನಾಕ್ ಕಳ್ಳರನ್ನು ಪೊಲೀಸರು ಸೆರೆಹಿಡಿದಿದ್ದು ಹೇಗೆ..?

 

ರಾಜ್ಯದ ಗುಪ್ತಚರ ಇಲಾಖೆಯ ಸಹಾಯದಿಂದ ಆರೋಪಿಗಳ ಚಲನವಲನಗಳ ಮಾಹಿತಿ ಪೊಲೀಸರಿಗೆ ಲಭ್ಯವಾಯಿತು. ಮೂವರು ಆರೋಪಿಗಳು ತಮಿಳುನಾಡು ಮೂಲದವರಾದರೂ ಮುಂಬೈ ಮೂಲದ ದರೋಡೆ ಗ್ಯಾಂಗ್‌ಗೆ ಸೇರ್ಪಡೆಗೊಂಡಿದ್ದರು. ದರೋಡೆ ಬಳಿಕ ಕೇರಳಕ್ಕೆ ಎಸ್ಕೇಪ್‌ ಆಗಿದ್ದರು.

 

ಆದ್ರೆ ಚಾಣಾಕ್ಷತನದಿಂದ ಪೊಲೀಸರು ಮುಂಬೈಗೆ ತನಿಖಾ ತಂಡ ಕಳುಹಿಸಿ ಮಾಹಿತಿ ಕಲೆಹಾಕಿದ್ದರು. 2 ತಂಡ ತಮಿಳುನಾಡಿನಲ್ಲಿ ಶೋಧ ಕಾರ್ಯಾಚರಣೆ ನಡೆಸಿತ್ತು. ಸದ್ಯ ಪ್ರಕರಣದಲ್ಲಿ ಮುರುಗಂಡಿ ದೇವರ್ ತಿರುವೇಲಿ ಅವರ ಪಾತ್ರ ಪ್ರಮುಖವಾಗಿದೆ ಎಂದು ತಿಳಿದುಬಂದಿದೆ. ಇನ್ನಷ್ಟು ತನಿಖೆಗಳು ಮುಂದುವರಿಯಲಿದೆ. ಆನಂತರ ಹೆಚ್ಚಿನ ಮಾಹಿತಿ ಲಭ್ಯವಾಗಲಿದೆ ಎಂದು ಪೊಲೀಸ್‌ ಕಮಿಷನರ್ ತಿಳಿಸಿದ್ದಾರೆ.