ಮಂಗಳೂರು| ಉಸ್ತುವಾರಿ ಸಚಿವರೇ ಎಲ್ಲಿದ್ದೀರಾ?;ಕರಾವಳಿಯಲ್ಲಿ ಹಿಂದುಳಿದ ವರ್ಗದ 1600 ಹೆಣ್ಮಕ್ಕಳಿಗೆ ಹಾಸ್ಟೆಲ್ ಸೀಟಿಲ್ಲ

  • 21 Jan 2025 04:21:58 PM

ಮಂಗಳೂರು: ಶಿಕ್ಷಣ ಪಡೆಯಲೆಂದು ಅತೀ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಆಗಮಿಸೋದು ದ.ಕ ಜಿಲ್ಲೆಗೆ. ಉತ್ತಮ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ನಮ್ಮ ಜಿಲ್ಲೆ ಅಗ್ರಮಾನ್ಯ ಸ್ಥಾನದಲ್ಲಿದೆ ಎಂಬ ಬಿರುದು ನಮಗೇನೂ ಹೊಸದಲ್ಲ. ಅದೆಷ್ಟೋ ಲಕ್ಷಾಂತರ ವಿದ್ಯಾರ್ಥಿಗಳು ಬೇರೆ ಬೇರೆ ರಾಜ್ಯ, ಜಿಲ್ಲೆ, ದೇಶಗಳಿಂದ ಇಲ್ಲಿಗೆ ವಿದ್ಯೆ ಕಲಿಯಲು ಬರುತ್ತಾರೆ.

 

ಆದರೆ ಇಂತಹ ವಿದ್ಯಾರ್ಥಿಗಳು ಸರ್ಕಾರದಿಂದ ಸಿಗುವ ಹಾಸ್ಟೆಲ್ ವ್ಯವಸ್ಥೆಯಿಂದ ವಂಚಿತರಾದರೆ ಹೇಗೆ..? ಹೀಗೊಂದು ಪ್ರಶ್ನೆ ಕರಾವಳಿಯಲ್ಲಿ ಇದೀಗ ವಿದ್ಯಾರ್ಥಿಗಳನ್ನು ಕಾಡುತ್ತಿದೆ. 

 

1600ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಸೀಟಿಲ್ಲ...!!

 

ದ.ಕ ಮತ್ತು ಉಡುಪಿ ಜಿಲ್ಲೆಯಲ್ಲಿ ಪದವಿ, ಪಿಜಿ ಕೋರ್ಸ್ ಗಳು, ವೈದ್ಯಕೀಯ ಪದವಿಗಳು, ಡಿಪ್ಲೊಮಾ, ಬಿಎಡ್, ನರ್ಸಿಂಗ್, ಐಟಿಐ ಕಲಿಯುವ ಲಕ್ಷಾಂತರ ಜನ ವಿದ್ಯಾರ್ಥಿಗಳಿದ್ದಾರೆ. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಡಿ ವಿದ್ಯಾರ್ಥಿಗಳಿಗೆ ದಕ್ಕಬೇಕಾದ ಹಾಸ್ಟೆಲ್ ವ್ಯವಸ್ಥೆ ಸರಿಯಾಗಿ ಪೂರೈಕೆಯಾಗುತ್ತಿಲ್ಲ.

 

ಎರಡೂ ಜಿಲ್ಲೆಯಲ್ಲಿ ಈಗಾಗಲೇ 1600ಕ್ಕೂ ಅಧಿಕ ವಿದ್ಯಾರ್ಥಿಗಳು ಹಾಸ್ಟೆಲ್ ಸೀಟ್ ಸಿಗದೆ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ದ.ಕ ಜಿಲ್ಲೆಯಲ್ಲಿ ಇರುವ ಒಟ್ಟು 80 ವಸತಿ ನಿಲಯಗಳಲ್ಲಿ ಮತ್ತು ಉಡುಪಿ ಜಿಲ್ಲೆಯಲ್ಲಿರುವ ಒಟ್ಟು 45 ವಿದ್ಯಾರ್ಥಿ ನಿಲಯಗಳಲ್ಲಿ ವಿದ್ಯಾರ್ಥಿಗಳು ಆಶ್ರಯ ಪಡೆಯುತ್ತಿದ್ದು ಅರ್ಜಿ ಸಲ್ಲಿಸಿರುವ 600ಕ್ಕೂ ಅಧಿಕ ಮಂದಿಗೆ ಹಾಸ್ಟೆಲ್ ಸೀಟ್ ನೀಡಲು ಸಾಧ್ಯವಾಗಿಲ್ಲ. ಈ ಬಗ್ಗೆ ವಿದ್ಯಾರ್ಥಿಗಳು ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. 

 

ಹಾಸ್ಟೆಲ್ ಸಿಗದಿದ್ದರೆ ಲಕ್ಷ ರೂ ಭರಿಸುವ ತಲೆನೋವು, ಇಲಾಖೆಗೆ ಬಾಡಿಗೆ ಹೊರೆ...!!

 

ಹಾಸ್ಟೆಲ್ ಸಿಗದ ವಿದ್ಯಾರ್ಥಿಗಳು ಹಿಂದುಳಿದ ವರ್ಗದ ಕಲ್ಯಾಣ ಇಲಾಖೆಯಿಂದ ತಿಂಗಳಿಗೆ 1500 ರೂ. ಯಂತೆ (10 ತಿಂಗಳು ಮಾತ್ರ) ವರ್ಷಕ್ಕೆ 15000ರೂ. ಪಡೆಯುವ ಸೌಲಭ್ಯವಿದೆ. ಆದರೆ ಮಂಗಳೂರು ನಗರದ ಪಿಜಿ/ ರೂಂಗಳಲ್ಲಿ ವಾಸ್ತವ್ಯ ಹೂಡುವುದಾದರೆ ಅತೀ ಹೆಚ್ಚು ಖರ್ಚನ್ನು ಭರಿಸಬೇಕಾಗುತ್ತದೆ‌.

 

ಇದು ವಿದ್ಯಾರ್ಥಿಗಳ ತಲೆನೋವಾದರೆ ಇತ್ತ ಕಡೆ ರಾಜ್ಯಾದ್ಯಂತ 150 ಹೊಸ ವಸತಿ ನಿಲಯಗಳನ್ನು ಪ್ರಾರಂಭಿಸಲಾಗಿದ್ದು ಸ್ವಂತ ಕಟ್ಟಡ ಇಲ್ಲದ ಕಾರಣ ಬಾಡಿಗೆ ಕಟ್ಟಡಗಳನ್ನು ಆಶ್ರಯಿಸಬೇಕಾಗಿದೆ. ಆದರೆ ಇಲಾಖೆಗೆ ಹೊಂದುವ ಬಾಡಿಗೆ ಕಟ್ಟಡ ಸಿಗುವುದೂ ಸುಲಭವಲ್ಲ ಇದು ಇಲಾಖೆಯ ಪರಿಸ್ಥಿತಿಯಾಗಿದೆ. ಒಟ್ಟಾರೆಯಾಗಿ ಈ ಸಮಸ್ಯೆ ಆದಷ್ಟು ಶೀಘ್ರವಾಗಿ ಬಗೆಹರಿಯಲಿ ಎಂಬುವುದೇ ವಿದ್ಯಾರ್ಥಿಗಳ ಮನವಿ...