ಪ್ರವೀಣ್ ನೆಟ್ಟಾರ್ ಕೊಲೆ ಪ್ರಕರಣದ ಮತ್ತೋರ್ವ ಆರೋಪಿ ಅರೆಸ್ಟ್, ಹತ್ಯೆಗೆ ಪಿಎಫ್ಐಯಿಂದ ಸೇವಾತಂಡವೆಂಬ ರಹಸ್ಯ ತಂಡ ರಚನೆ...

  • 23 Jan 2025 03:25:56 PM

ಪ್ರವೀಣ್ ನೆಟ್ಟಾರ್ ಕೊಲೆ ಪ್ರಕರಣ ರಾಜ್ಯಾದ್ಯಂತ ಸಂಚಲನವನ್ನು ಮೂಡಿಸಿದ್ದಂತಹ ಪ್ರಕರಣವಾಗಿತ್ತು. ರಾಜಕೀಯ ತಿರುವನ್ನೂ ಕೂಡ ಪಡೆದುಕೊಂಡಿತ್ತು. ಈಗಾಗಲೇ ಈ ಪ್ರಕರಣದ ಪ್ರಮುಖ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದು ಮತ್ತೋರ್ವ ಆರೋಪಿ ಪೊಲೀಸರ ಬಲೆಗೆ ಬಿದ್ದಿದ್ದಾನೆ. 

 

ಈ ಪ್ರಕರಣದ ಪ್ರಮುಖ ಕಿಂಗ್ ಪಿನ್ ಗೆ ಆಶ್ರಯ ನೀಡಿದಾತ ಅರೆಸ್ಟ್...!!

 

ಪ್ರವೀಣ್ ನೆಟ್ಟಾರ್ ಕೊಲೆ ಪ್ರಕರಣದ ಪ್ರಮುಖ ಆರೋಪಿ ಮುಸ್ತಾಫ ಪೈಚಾರ್ ಗೆ ಆಶ್ರಯ ನೀಡಿ ಆತ ತಪ್ಪಿಸಿಕೊಳ್ಳಲು ಸಹಾಯ ಮಾಡಿದ ಅತೀಖ್ ಅಹ್ಮದ್ ಬಂಧಿತ ಆರೋಪಿ. ಈತನ ಹಿನ್ನೆಲೆ ನೋಡೋದಾದ್ರೆ ನಿಷೇಧಿತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಸಕ್ರಿಯ ಸದಸ್ಯನಾಗಿದ್ದ. ಹತ್ಯೆ ಬಳಿಕ ಕಣ್ತಪ್ಪಿಸಿ ಓಡಾಡಿಕೊಂಡಿದ್ದ ಈತ ಇದೀಗ ಎನ್ಐಎ ಬಲೆಗೆ ಬಿದ್ದಿದ್ದಾನೆ. ಬೆಳ್ಳಾರೆಯಲ್ಲಿ ನಡೆದ ಮಸೂದ್ ಕೊಲೆಗೆ ಪ್ರತೀಕಾರವಾಗಿ ಅವರು ಪ್ರವೀಣ್ ನೆಟ್ಟಾರ್ ಕೊಲೆಗೆ ಸಂಚು ರೂಪಿಸಿದ್ದರು ಎಂದು ತಿಳಿದುಬಂದಿದೆ. 

 

ಹಿಂದೂಗಳನ್ನು ಹತ್ಯೆ ಮಾಡಲು ಪಿಎಫ್ಐನಿಂದ ರಹಸ್ಯ ತಂಡ ರಚನೆ...!

 

ಪಿಎಫ್ಐ ಸೇವಾ ತಂಡಗಳೆಂಬ ಹೆಸರಿನಲ್ಲಿ ರಹಸ್ಯವಾದ ಗ್ರೂಪ್ ಗಳನ್ನು ಮಾಡಿಕೊಂಡಿತ್ತು. ಪ್ರವೀಣ್ ನೆಟ್ಟಾರ್ ನಂತಹ ಹಿಂದೂ ಕಾರ್ಯಕರ್ತರನ್ನು ಗುರಿಯಾಗಿಸಿಕೊಂಡು ಹತ್ಯೆಗಳನ್ನು ಮಾಡಲು ಶಸ್ತಾಸ್ತ್ರ ಮತ್ತು ಕಣ್ಗಾವಲು ತರಬೇತಿಯನ್ನು ಪಡೆದುಕೊಂಡಿತ್ತು ಎಂದು ಎನ್ಐಎ ತನಿಖೆ ವೇಳೆ ಬಹಿರಂಗವಾಗಿದೆ. ಇದೇ ತಂಡದ ಮಾರ್ಗದರ್ಶನದಲ್ಲಿ ಪ್ರವೀಣ್ ನೆಟ್ಟಾರ್ ಹತ್ಯೆಗೆ ಕೂಡಾ ಪ್ಲ್ಯಾನ್ ಮಾಡಿಕೊಳ್ಳಲಾಗಿತ್ತು.

 

ಸಮಾಜದಲ್ಲಿ ಅಶಾಂತಿ ಹುಟ್ಟಿಸುವುದೇ ಇವರ ಪ್ರಮುಖ ಧ್ಯೇಯವಾಗಿದೆ. ಈಗಾಗಲೇ ಒಟ್ಟು ಇಪ್ಪತ್ತೊಂದು ಆರೋಪಿಗಳು ಅರೆಸ್ಟ್ ಆಗಿದ್ದು ಇನ್ನುಳಿದ ಆರು ಆರೋಪಿಗಳಿಗಾಗಿ ಶೋಧ ಕಾರ್ಯ ಮುಂದುವರೆದಿದ್ದು ಅವರನ್ನು ಪತ್ತೆ ಹಚ್ಚಲು ಸಹಕರಿಸಿದವರಿಗೆ ಇನಾಮು ಕೂಡಾ ಘೋಷಣೆ ಮಾಡಲಾಗಿದೆ.