ಪಡುಬಿದ್ರಿ : ಮನುಷ್ಯ ಯಾವ ಸಂಕಷ್ಟವನ್ನು ಬೇಕಾದರೂ ಎದುರಿಸಬಹುದು. ಆದರೆ ಈ ಸಾಲಬಾಧೆ ಅನ್ನುವಂತದ್ದು ನಮ್ಮನ್ನು ಎಲ್ಲಿ ಹೋದರೂ, ಏನು ಮಾಡಿದರೂ ಬಿಡದೇ ಕಾಡುವಂತಹ ಪರಮ ಸಂಕಟ. ಯಾರಲ್ಲಾದರೂ ನಾವು ಸಾಲವನ್ನು ತೆಗೆದುಕೊಂಡರೆ ಅದನ್ನು ತೀರಿಸುವವರೆಗೆ ತೃಪ್ತಿ ಇರೋದಿಲ್ಲ.
ಅದೆಷ್ಟೋ ಬಾರಿ ಸಾಲ ನೀಡಿದ ವ್ಯಕ್ತಿ ಸಿಗಬಹುದೇನೋ ಎಂದು ಅನೇಕ ಕಾರ್ಯಕ್ರಮಗಳನ್ನೂ ಹಾಜರಾಗದೆ ಮಿಸ್ ಮಾಡಿಕೊಂಡಿರುತ್ತೇವೆ. ಈ ಸಾಲಬಾಧೆ ಅನ್ನುವಂತದ್ದು ಮಾನಸಿಕ ಶಾಂತಿಯ ಮೇಲೂ ಅಡ್ಡ ಪರಿಣಾಮ ಬೀಳುತ್ತದೆ. ಕೆಲವೊಮ್ಮೆ ಸಾಲಗಾರರ ಕಾಟ ತಾಳಲಾರದೆ ಅನೇಕ ಜನ ಜೀವನವನ್ನೇ ಅಂತ್ಯಗೊಳಿಸುವ ನಿದರ್ಶನಗಳನ್ನು ನಾವು ನೋಡಿರುತ್ತೇವೆ. ಅದೇ ರೀತಿ ಇಲ್ಲೊಬ್ಬ ವ್ಯಕ್ತಿ ಪಡೆದ ಸಾಲ ವಾಪಸ್ಸು ನೀಡಲಿಲ್ಲ ಎಂಬ ಕಾರಣಕ್ಕೆ ಹಲ್ಲೆಗೊಳಗಾದ ಘಟನೆ ನಡೆದಿದೆ.
ದ.ಕ ಜಿಲ್ಲೆಯಲ್ಲೂ ನಡೀತ್ತಿದೆ ಮೀಟರ್ ಬಡ್ಡಿ ಕ್ರೌರ್ಯ...!!
ಸಾಲ ವಾಪಸ್ಸು ನೀಡಲಿಲ್ಲ ಎಂಬ ಕಾರಣಕ್ಕೆ ಯಕ್ಷಗಾನ ಕಲಾವಿದರೋರ್ವರಿಗೆ ಇನ್ನೋರ್ವ ಯಕ್ಷಗಾನ ಕಲಾವಿದ ಮತ್ತು ಇನ್ನಿಬ್ಬರು ಕಂಬಳದ ಕೋಣಗಳಿಗೆ ಹೊಡೆಯುವ ಬೆತ್ತದಿಂದ ಹೊಡೆದು ಹಲ್ಲೆ ನಡೆಸಿದ ಘಟನೆಯೊಂದು ನಡೆದಿದೆ. ಪಡುಬಿದ್ರಿ ನಿವಾಸಿ, ಸಸಿಹಿತ್ಲು ಶ್ರೀ ಭಗವತಿ ಯಕ್ಷಗಾನ ಮೇಳದ ಕಲಾವಿದ ನಿತಿನ್ ಕುಮಾರ್ ಹಲ್ಲೆಗೊಳಗಾದ ವ್ಯಕ್ತಿ.
ಆತನ ಸ್ನೇಹಿತ ಪಾವಂಜೆ ಮೇಳದ ಸಚಿನ್ ಅಮೀನ್ ಉದ್ಯಾವರ ಹಲ್ಲೆ ನಡೆಸಿದ ಆರೋಪಿ ಯಕ್ಷಗಾನ ಕಲಾವಿದ. ಈತನ ಜೊತೆ ಸೇರಿ ಆತನ ತಂದೆ ಕುಶಾಲಣ್ಣ ಹಾಗೂ ಇನ್ನೋರ್ವ ಫೈನಾನ್ಶಿಯರ್ ಹಲ್ಲೆ ನಡೆಸಿದ ಆರೋಪಿಗಳಾಗಿದ್ದಾರೆ.
ಖಾಲಿ ಬಾಂಡ್ ಪೇಪರ್ ಗೆ ಬಲಾತ್ಕಾರವಾಗಿ ಸಹಿ ಪಡೆದುಕೊಂಡ ಆರೋಪಿಗಳು..!
ಆರೋಪಿ ಸಚಿನ್ ಮತ್ತು ಕಲಾವಿದ ನಿತಿನ್ ಆತ್ಮೀಯ ಗೆಳೆಯರಾಗಿದ್ದರು. ೨೦೨೦ರಲ್ಲಿ ನಿತಿನ್ ಸಚಿನ್ ಬಳಿ ಬಡ್ಡಿಗೆ ಸಾಲ ಪಡೆದುಕೊಂಡಿದ್ದರು. ನಿರಂತರವಾಗಿ ಬಡ್ಡಿ ಕಟ್ಟುತ್ತಿದ್ದ ನಿತಿನ್ ಇತ್ತೀಚೆಗೆ ಕೆಲ ತಿಂಗಳುಗಳಿಂದ ಸರಿಯಾಗಿ ಬಡ್ಡಿ ಕಟ್ಟುತ್ತಿರಲಿಲ್ಲ.
ಆ ಸಂದರ್ಭ ಪಡೆದ ಸಾಲ ಹಿಂತಿರುಗಿಸುವಂತೆ ಸಚಿನ್ ನಿರಂತರವಾಗಿ ನಿತಿನ್ ಗೆ ಒತ್ತಡ ಹಾಕುತ್ತಿದ್ದರು. ಮೊನ್ನೆ ಜ.೨೧ರಂದು ಈ ಆರೋಪಿಗಳೆಲ್ಲರೂ ಸೇರಿ ಉದ್ಯಾವರದ ಮನೆಯೊಂದರಲ್ಲಿ ಕಂಬಳದ ಬಾರುಕೋಲಿನಲ್ಲಿ ನಿತಿನ್ ಮೇಲೆ ಹಲ್ಲೆ ನಡೆಸಿ ಥಳಿಸಿದ್ದಾರೆ. ಕೆನ್ನೆಗೆ ಹೊಡೆದು ಖಾಲಿ ಬಾಂಡ್ ಪೇಪರ್ ಗೆ ಒತ್ತಾಯದಿಂದ ಸಹಿ ಪಡೆದುಕೊಂಡಿದ್ದಾರೆ.
ಸಂಜೆ ವಾಪಸ್ಸು ಪಡುಬಿದ್ರಿಗೆ ಆರೋಪಿಗಳೇ ಆತನನ್ನು ಕಳುಹಿಸಿಕೊಟ್ಟಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದರೂ ನಿತಿನ್ ಆ ದಿನ ರಾತ್ರಿ ಪುತ್ತೂರಿನಲ್ಲಿ ನಡೆದ ಯಕ್ಷಗಾನದಲ್ಲಿ ಪ್ರದರ್ಶನ ನೀಡಿದ್ದಾರೆ. ನಂತರ ಮರುದಿನ ಪಡುಬಿದ್ರಿ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಪೊಲೀಸರಿಗೆ ದೂರು ನೀಡಿದ್ದಾರೆ.