ಇತ್ತೀಚೆಗೆ ಮೈಕ್ರೋ ಫೈನಾನ್ಸ್ ಎಂಬ ವಿಶೇಷ ಯೋಜನೆ ಜನರ ಕುತ್ತಿಗೆಗೆ ಪಾಶವಾಗಿ ಪರಿಣಮಿಸುತ್ತಿದೆ. ಇದರಿಂದ ಅನೇಕ ಜನ ವಿಪರೀತ ಸಮಸ್ಯೆಯನ್ನು ಎದುರಿಸುತ್ತಿದ್ದು ಇನ್ನೂ ಕೆಲವರು ಇತ್ತೀಚೆಗೆ ಇದರಿಂದ ಬೇಸತ್ತು ಆತ್ಮಹತ್ಯೆಗೆ ಶರಣಾದ ಜ್ವಲಂತ ನಿದರ್ಶನಗಳೂ ಇದೆ.
ಇದೀಗ ಅದಕ್ಕೆ ಪೂರಕವಾಗಿ ಮತ್ತೊಬ್ಬ ಮಹಿಳೆ ಈ ಸಮಸ್ಯೆಯಿಂದ ಮುಕ್ತಿ ಕೊಡುವಂತೆ ರಾಜ್ಯದ ಮುಖ್ಯಮಂತ್ರಿಯಲ್ಲಿ ಬೇಡಿಕೆ ಇಟ್ಟಿದ್ದು ಮಾಂಗಲ್ಯವನ್ನು ಉಳಿಸಿಕೊಡುವಂತೆ ಮನವಿ ಮಾಡಿದ್ದಾರೆ.
ಮೈಕ್ರೋ ಫೈನಾನ್ಸ್ ಕಾಟ ತಡೆಯಲಾರದೆ ಸಿಎಂಗೆ ಪತ್ರ ಬರೆದ ಮಹಿಳೆ...!
ಮೈಕ್ರೋ ಫೈನಾನ್ಷಿಯರ್ ಕಾಟವನ್ನು ತಾಳಲಾರದೆ ಅವರ ಕಿರುಕುಳವನ್ನು ತಪ್ಪಿಸಿ ರೈತ ಮಹಿಳೆಯರ ಮಾಂಗಲ್ಯ ಸರವನ್ನು ಉಳಿಸಿಕೊಡುವಂತೆ ಸಿಎಂ ಸಿದ್ಧರಾಮಯ್ಯ ಅವರಿಗೆ ಮನವಿ ಪತ್ರದ ಜೊತೆಗೆ ತಾಳಿಯನ್ನೂ ಕಳುಹಿಸಿಕೊಡುವ ಮುಖೇನ ರಾಜ್ಯ ರೈತ ಸಂಘದ ರಾಣೆಬೆನ್ನೂರು ತಾಲ್ಲೂಕು ಘಟಕದಿಂದ ಪ್ರತಿಭಟನೆ ನಡೆಸಲಾಯಿತು.
ರಾಣೆಬೆನ್ನೂರು ತಾಲ್ಲೂಕಿನಲ್ಲಿ ಕೆಲವು ಫೈನಾನ್ಸ್ ಗಳು ಲೋನ್ ಕೊಟ್ಟು ಅದಕ್ಕೆ ದುಪ್ಪಟ್ಟು ಬಡ್ಡಿ ವಸೂಲಿ ಮಾಡುತ್ತಿದ್ದಾರೆ. ರಾತ್ರಿ ಸಮಯಕ್ಕೆ ಮನೆಗೆ ಬಂದು ಸಾಲ ಕಟ್ಟಿ ಎಂದು ಒತ್ತಡ ಹಾಕುತ್ತಾ ಸಾಲ ಕಟ್ಟಿಲ್ಲದಿದ್ದರೆ ಮನೆಗೆ ಬೀಗ ಹಾಕುತ್ತೇವೆ ಎಂದು ಗದರಿಸಿ ಹರಾಜು ಮಾಡುತ್ತೇವೆ ಎಂದು ಕೂಡಾ ಬೆದರಿಕೆ ಹಾಕುತ್ತಿದ್ದಾರೆ. ಇವರ ಕಿರಿಕಿರಿಯಿಂದ ಅನೇಕ ಜನ ಊರು ಬಿಟ್ಟು ಹೋಗಿದ್ದರೆ ಇನ್ನೂ ಕೆಲವರು ಆತ್ಮಹತ್ಯೆಯನ್ನೂ ಮಾಡಿಕೊಂಡಿದ್ದಾರೆ. ಆದರೂ ಇವರಿಗೆ ಮಾತ್ರ ಬುದ್ಧಿ ಇಲ್ಲ ಎಂದು ಊರಿನ ಜನರು ಕಿಡಿಕಾರಿದ್ದಾರೆ.
ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮದ ಎಚ್ಚರಿಕೆ ನೀಡಿದ ಗೃಹ ಸಚಿವ..!
ರೈತ ಸಂಘದ ಪ್ರತಿಭಟನೆಗೂ ಮುನ್ನ ಎಸ್ಪಿ, ಡಿಸಿ ಕಚೇರಿಗೆ ಮನವಿಯನ್ನು ಸಲ್ಲಿಸಲಾಯಿತು. ಇನ್ನು ಸಿಎಂಗೆ ಬರೆದ ಪತ್ರದಲ್ಲಿ ` ಇವರ ಮೇಲೆ ಕಟ್ಟುನಿಟ್ಟಿನ ಕ್ರಮ ಜರುಗಿಸಿ ನಿಯಮಪ್ರಕಾರ ಹಣ ವಸೂಲಿ ಮಾಡುವಂತೆ ಖಡಕ್ ಆದೇಶ ನೀಡಬೇಕು. ಜೊತೆಗೆ ಮಹಿಳೆಯರ ಸಮಸ್ಯೆ ಅರಿತು ಮಾಂಗಲ್ಯ ಸರವನ್ನು ಉಳಿಸಿಕೊಡುವಂತೆ ಪತ್ರದಲ್ಲಿ ಕೋರಲಾಗಿದೆ.
ಇನ್ನು ಈ ವಿಚಾರಕ್ಕೆ ಸಂಬಂಧಿಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಗೃಹ ಸಚಿವ ಜಿ.ಪರಮೇಶ್ವರ್ ಅವರು ಎಚ್ಚರಿಕೆಯನ್ನು ನೀಡಿದ್ದಾರೆ.