ಮಂಗಳೂರು|ಹಣ ಡಬಲ್ ಮಾಡಿಕೊಡ್ತೇನೆ ಎಂದು ಹೇಳಿ ವ್ಯಕ್ತಿಗೆ ಲಕ್ಷಾಂತರ ರೂ. ಪಂಗನಾಮ ಹಾಕಿದ ಭೂಪ..!!

  • 25 Jan 2025 02:47:11 PM

ಮಂಗಳೂರು : ಇತ್ತೀಚಿನ ದಿನಗಳಲ್ಲಿ ಹಣದ ವಿಚಾರದಲ್ಲಿ ಅನೇಕ ರೀತಿಯ ಮೋಸ, ವಂಚನೆ ಪ್ರಕರಣಗಳು ನಡೆಯುತ್ತಿದೆ. ಧನಲಾಭಕ್ಕಾಗಿ ಕೋಟ್ಯಾಂತರ ರೂ. ದರೋಡೆ ಮಾಡುವ ಖತರ್ನಾಕ್ ಖದೀಮರೂ ಸಮಾಜದಲ್ಲಿ ಇದ್ದಾರೆ‌. ಇದರ ಜೊತೆಗೆ ಈಗೀಗ ಕೆಲವು ಅನಧಿಕೃತ ಸ್ಕೀಮ್ ಗಳು, ವಂಚಿಸುವ ಹಣದ ಜಾಲಗಳು ಸೃಷ್ಟಿಯಾಗಿದೆ.

 

ತಮ್ಮ ಸುತ್ತಮುತ್ತ ಅನೇಕ ಪ್ರಕರಣಗಳು ನಡೆದು ಬೆಳಕಿಗೆ ಬರುತ್ತಿದ್ದರೂ ಜನರಿಗೆ ಇನ್ನೂ ತಾವು ಮೋಸ ಹೋಗುವ ಬಗ್ಗೆ ಜ್ಞಾನ ಬಂದಿಲ್ಲ. ಇಲ್ಲೊಬ್ಬ ಮಂಗಳೂರಿನ ವ್ಯಕ್ತಿ ಡಬಲ್ ಹಣ ಪಡೆಯುವ ವ್ಯಾಮೋಹದಿಂದ ತನ್ನ ಲಕ್ಷಾಂತರ ರೂ. ಹಣವನ್ನು ಕಳೆದುಕೊಂಡಿದ್ದಾರೆ. 

 

ಟೆಲಿಗ್ರಾಂ ಲಿಂಕ್ ಒತ್ತಿ ಪೇಚಿಗೆ ಸಿಲುಕಿದ ಮಂಗಳೂರಿನ ವ್ಯಕ್ತಿ..!

 

ಮಂಗಳೂರಿನ ವ್ಯಕ್ತಿಯೋರ್ವರು ಶೇರ್ ಮಾರ್ಕೆಟ್ ನಲ್ಲಿ ಹಣ ಹೂಡಿಕೆ ಮಾಡುವ ಬಗ್ಗೆ ಯೂಟ್ಯೂಬ್ ನಲ್ಲಿ ವೀಡಿಯೋಗಳನ್ನು ನೋಡುತ್ತಿದ್ದರು. ಅದರಲ್ಲಿ ಸೂಚಿಸಿದಂತೆ ಇವರು ಟೆಲಿಗ್ರಾಂ ಆ್ಯಪ್ ನಲ್ಲಿ ಮಿಸ್ಟರ್ ಮಾರ್ಕೆಟ್ ಅನಲಿಸ್ಟ್ ಮ್ಯಾಂಗ್- ಬೈ ಸೆಬಿ ರಾ ಎಂಬ ಟೆಲಿಗ್ರಾಂ ಪೇಜ್ ಓಪನ್ ಆಗಿದೆ.

 

ಅದಕ್ಕೆ ಜಾಯಿನ್ ಆದಾಗ ಅದರಲ್ಲಿ ಮೊದಲಿಗೆ ಐದು ಸಾವಿರ ರೂ. ಹೂಡಿಕೆ ಮಾಡಿದರೆ ಇಪ್ಪತ್ತು ಸಾವಿರ ರೂ. ಲಾಭಾಂಶ ಬರುವುದಾಗಿ ಮೆಸೇಜ್ ಬಂದಿತ್ತು. ನಂತರ ಕೆಳಗಡೆ ವಾಟ್ಸಾಪ್ ಲಿಂಕ್ ಬಂದಿದ್ದು ಆ ಲಿಂಕ್ ಆನ್ ಮಾಡಿದಾಗ ವಂಚಕರಿಗೆ ಕನೆಕ್ಟ್ ಆಗಿದೆ. 

 

ಲಕ್ಷಾಂತರ ರೂ. ವಂಚಿಸಿದ ಖತರ್ನಾಕ್ ಕಿಲಾಡಿಗಳು...!!

 

ಆರೋಪಿಗಳ ಮಾತನ್ನು ನಂಬಿ, ಅಪರಿಚಿತ ವ್ಯಕ್ತಿಗಳು ತಿಳಿಸಿದಂತೆ ಈ ವ್ಯಕ್ತಿ ಕಳೆದ ವರ್ಷ ಅಕ್ಟೋಬರ್ ನಿಂದ ಡಿಸೆಂಬರ್ ವರೆಗೆ ನಿರಂತರವಾಗಿ ವಾಟ್ಸಾಪ್ ನಲ್ಲಿ ತಿಳಿಸಿದ ಬ್ಯಾಂಕ್ ಖಾತೆಗೆ ಹದಿನಾಲ್ಕು ಲಕ್ಷಕ್ಕೂ ಅಧಿಕ ಹಣವನ್ನು ವರ್ಗಾವಣೆ ಮಾಡಿದ್ದಾರೆ. ಇದೀಗ ಖದೀಮರು ಕಟ್ಟಿದ ಹಣಕ್ಕೆ ಡಬಲ್ ಹಣ ನೀಡದೆ, ಕಟ್ಟಿದನ್ನೂ ಹಿಂತಿರುಗಿಸದೆ ಮೋಸ ಮಾಡಿದ್ದಾರೆ ಎಂದು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.