ಕುಂಬಳೆ: ಅಂಗಡಿಮೊಗರು ಸಮೀಪದ ದೇಲಂಪಾಡಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಬ್ರಹ್ಮಕಲಶೋತ್ಸವಕ್ಕೆ ಸಜ್ಜಾಗುತ್ತಿದೆ. ಇದರ ಪೂರ್ವಭಾವಿಯಾಗಿ ದೇವಾಲಯದಲ್ಲಿ ಅನುಜ್ಞಾ ಕಲಶ ಮತ್ತು ಬಾಲಾಲಯ ಪ್ರತಿಷ್ಠೆ ನಡೆಯಿತು.
ಕ್ಷೇತ್ರದ ತಂತ್ರಿಗಳಾದ ಬ್ರಹ್ಮಶ್ರೀ ದೇಲಂಪಾಡಿ ಗಣೇಶ ತಂತ್ರಿಗಳ ಕರ್ಮಿಕತ್ವದಲ್ಲಿ ವೈಭವದಿಂದ ಕಾರ್ಯಕ್ರಮಗಳು ನಡೆದುವು.
ದೇವಾಲಯದ ನವೀಕರಣ ಕಾಮಗಾರಿಗಾಗಿ ಕ್ಷೇತ್ರ ಭಕ್ತರ ಸಮಕ್ಷಮದಲ್ಲಿ ಅನುಜ್ಞಾ ಕಲಶ ಮತ್ತು ಬಾಲಾಲಯ ಪ್ರತಿಷ್ಠೆ ನಡೆಯಿತು.
ಇದೀಗ ಮಹಾ ಪೂಜಾ ಸಮಯವನ್ನು ಬೆಳಿಗ್ಗೆ 9 ಗಂಟೆಗೆ ನಡೆಸ ಬೇಕಾಗಿ ತಂತ್ರಿಗಳು ನಿರ್ದೇಶಿಸಿದರು. ಮೇ.6ರಿಂದ 12ರ ತನಕ ನವೀಕರಣ, ಪುನರ್ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವ ಜರಗಲಿದ್ದು ಇದರ ಪೂರ್ವಭಾವಿಯಾಗಿ ಗರ್ಭಗುಡಿ, ನಮಸ್ಕಾರ ಮಂಟಪ ಹಾಗೂ ಉಪ ದೇವರುಗಳ ಸಾನಿಧ್ಯ ಜೀರ್ಣೋದ್ಧಾರಕ್ಕಾಗಿ ಅನುಜ್ಞೆಯನ್ನು ನಡೆಸಲಾಯಿತು.
ಈ ಸಂದರ್ಭದಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಉದ್ಯಮಿ ಕೊಡುಗೈ ದಾನಿ ಗೋಪಾಲನ್ ಆರಿಕ್ಕಾಡಿ , ಸತ್ಯನಾರಾಯಣ ಹೊಳ್ಳ ಕಟೀಲು ಇವರನ್ನು ಕ್ಷೇತ್ರ ಸಮಿತಿ ವತಿಯಿಂದ ಸನ್ಮಾನಿಸಲಾಯಿತು. ಪುತ್ತಿಗೆ ಗ್ರಾ.ಪಂ. ಅಧ್ಯಕ್ಷ ಡಿ.ಸುಬ್ಬಣ್ಣ ಆಳ್ವ ಅಧ್ಯಕ್ಷತೆ ವಹಿಸಿದರು. ಕ್ಷೇತ್ರ ಆಡಳಿತ ಮೊಕ್ತೇಸರ ಬಿ.ಸುಬ್ಬಯ್ಯ ರೈ ಇಚ್ಲಂಪಾಡಿ, ಎಂ.ಶಂಕರ ರೈ ಮಾಸ್ತರ್, ವೇ.ಮೂ. ಎಃ.ಎನ್ .ಮಯ್ಯ ಕಾಟುಕುಕ್ಕೆ, ದೇವಳದ ಪ್ರಧಾನ ಅರ್ಚಕ ಗೋಪಾಲಕೃಷ್ಣ ಅಡಿಗ, ಶ್ಯಾಮರಾಯ ಹೊಳ್ಳ,ಡಿ.ಎನ್ ರಾಧಾಕೃಷ್ಣ, ಶಿವಪ್ಪ ರೈ ಊರ ಹಿರಿಯರು, ಸ್ವಯಂ ಸೇವಕರು ಉಪಸ್ಥಿತರಿದ್ದರು. ಸೇವಾ ಸಮಿತಿ ಅಧ್ಯಕ್ಷ ದಾಮೋದರನ್ ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ಡಿ.ರಾಜೇಂದ್ರರೈ ವಂದಿಸಿದರು.