ದಕ್ಷಿಣಕನ್ನಡ|ಡಿಗ್ರಿ ವಿದ್ಯಾರ್ಥಿನಿ ಈಗ ಬ್ಯಾಂಕ್ ಡೈರೆಕ್ಟರ್...!! ಸಣ್ಣ ವಯಸ್ಸಿಗೆ ಈ ದೊಡ್ಡ ಹುದ್ದೆ ದಕ್ಕಿದ್ದು ಹೇಗೆ ಗೊತ್ತಾ..?

  • 27 Jan 2025 12:14:37 PM

ದಕ್ಷಿಣ ಕನ್ನಡ: ಸಾಧಿಸುವ ಛಲವಿದ್ದರೆ ಅದಕ್ಕೆ ನೂರಾರು ಮಾರ್ಗಗಳಿರುತ್ತದೆ. ಅಸಾಧ್ಯವಾದದ್ದು ಯಾವುದೂ ಇಲ್ಲ. ಆತ್ಮವಿಶ್ವಾಸ, ಸಾಧಿಸುವ ಹಠವಿದ್ದರೆ ಯಾವುದೇ ವ್ಯಕ್ತಿಗೆ ಸಾಧನೆ ಮಾಡಲು ಸಾಧ್ಯ ಎನ್ನುವುದಕ್ಕೆ ಕರಾವಳಿಯ ಈ ಯುವತಿಯೇ ಜೀವಂತ ನಿದರ್ಶನ. ಡಿಗ್ರಿ ಓದುತ್ತಿರುವಾಗಲೇ ಬ್ಯಾಂಕ್ ನ ಉನ್ನತ ಹುದ್ದೆ ಅಲಂಕರಿಸಿದ ಇವಳ ಸಾಧನೆ ಕೇಳಿದ್ರೆ ನೀವು ಹುಬ್ಬೇರಿಸಲೇಬೇಕು. 

 

ಬ್ಯಾಂಕ್ ನಿರ್ದೇಶಕಿಯಾಗಿ ಮೊದಲ ಬಾರಿಗೆ ಇತಿಹಾಸ ಸೃಷ್ಟಿಸಿದ ವಿದ್ಯಾರ್ಥಿನಿ..!!

 

ಪುತ್ತೂರು ಭೂ ಅಭಿವೃದ್ಧಿ ಬ್ಯಾಂಕ್‌ನ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಪದವಿ ವ್ಯಾಸಂಗ ಮಾಡುತ್ತಿರುವ ಕಾಲೇಜಿನ ವಿದ್ಯಾರ್ಥಿನಿಯೊಬ್ಬರು ಬ್ಯಾಂಕ್ ನಿರ್ದೇಶಕಿಯಾಗಿ ಆಯ್ಕೆಯಾಗಿದ್ದಾರೆ. ಸಹಕಾರ ಭಾರತಿ ಅಡಿಯಲ್ಲಿ ಅವಿರೋಧವಾಗಿ ಆಯ್ಕೆಯಾಗಿರುವ ಈಕೆ ಸುಬ್ರಹ್ಮಣ್ಯ ಪ್ರಖ್ಯಾತ ಕೆಎಸ್ ಎಸ್ ಕಾಲೇಜಿನ ಬಿಬಿಎ ಫೈನಲ್ ಇಯರ್ ವಿದ್ಯಾರ್ಥಿನಿ.

 

ಕಡಬ ವಲಯದ ಮಹಿಳಾ ಮೀಸಲು ಕ್ಷೇತ್ರದಿಂದ ಆಯ್ಕೆಗೊಂಡ ಅವರು ಇಲ್ಲಿ ಆಯ್ಕೆಯಾಗಿರುವ ನಿರ್ದೇಶಕರ ಪೈಕಿ ಅತ್ಯಂತ ಕಿರಿಯ ಸದಸ್ಯೆ. ಯಾವುದೇ ಕನಸು ನನಸಾಗಬೇಕಾದರೆ ಯೋಗದ ಜೊತೆಗೆ ಅದೃಷ್ಟವೂ ಇರಬೇಕು. ಸಹಕಾರಿ ಬ್ಯಾಂಕಿನ ಮೆಟ್ಟಿಲು ಏರಿದ ಮೊದಲ ಕಾಲೇಜು ವಿದ್ಯಾರ್ಥಿನಿ ಸ್ವಾತಿ ರೈ ಅರ್ತಿಲ ಅವರಿಗೆ ಇದು ಎರಡೂ ಇತ್ತು ಅನಿಸುತ್ತೆ..

 

ಸಿಕ್ಕ ಅವಕಾಶ ಸದುಪಯೋಗಪಡಿಸಿಕೊಂಡ ಕಡಬದ ಯುವತಿ...!!

 

ಕಡಬ ತಾಲೂಕಿನ ಆರ್ತಿಲ ದಿವಂಗತ ಆನಂದ ರೈ ಮತ್ತು ತಾರಾ ರೈ ಅವರ ಪುತ್ರಿಯಾದ ಸ್ವಾತಿ ರೈ ಅವರಿಗೆ ಈ ಸುವರ್ಣ ಅವಕಾಶವೊಂದು ಲಭಿಸಿದೆ. ಈ ವಿಚಾರ ಕೇಳಿ ಕುಟುಂಬಕ್ಕೆ ಅತ್ಯಂತ ಸಂತೋಷವಾಗಿದೆ. ತಾಯಿ ಮತ್ತು ಅಣ್ಣ ಯತೀಶ್ ರೈ ಜತೆ ವಾಸಿಸುತ್ತಿರುವ ಸ್ವಾತಿ ರೈ ಅವರಿಗೆ ಈ ಅವಕಾಶ ಅಚಾನಕ್ ಆಗಿ ಒದಗಿ ಬಂದಿದ್ದು ಸರಿಯಾದ ರೀತಿಯಲ್ಲಿ ಬಳಸಿಕೊಂಡಿದ್ದಾರೆ.ಈ ಅವಕಾಶ ಮೊದಲಿಗೆ ಇವರ ತಾಯಿ ತಾರಾ ರೈ ಅವರಿಗೆ ಬಂದಿತ್ತು. ಆದರೆ ಅವರು ತಮ್ಮದೇ ಆದ ವೈಯಕ್ತಿಕ ಕಾರಣಗಳಿಂದ ಅದನ್ನು ತಿರಸ್ಕರಿಸಿದ್ದರು.

 

ಸ್ವಾತಿಯ ಕುಟುಂಬದವರು ನೀನೇ ಯಾಕೆ ಈ ಅವಕಾಶ ಬಳಕೆ ಮಾಡಿಕೊಳ್ಳಬಾರದು ಎಂದು ಪ್ರಶ್ನಿಸಿದರು. ಇದರ ಜತೆಗೆ ಚಿಕ್ಕಪ್ಪ ಚೇತನ್ ರೈ, ಕಡಬ ಬಿಜೆಪಿ ಶಕ್ತಿಕೇಂದ್ರದ ಅಧ್ಯಕ್ಷ ಪ್ರಕಾಶ್ ಎನ್,ಕೆ ಇವರೂ ಮಾನಸಿಕ ಸ್ಥೈರ್ಯ ನೀಡಿದ್ದು ಆಕೆ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಯಿತು. ಕೃಷಿಕರ ಪರವಾಗಿರುವ ಸಹಕಾರಿ ಸಂಸ್ಥೆಯೊಂದರ ನಿರ್ದೇಶಕಿ ಆಗಿ ಆಯ್ಕೆಯಾಗುವ ಮೂಲಕ ಒಬ್ಬ ಸಾಧಾರಣ ಮಧ್ಯಮ ಕುಟುಂಬದ ವಿದ್ಯಾರ್ಥಿನಿ ತನ್ನೂರಿಗೇ ಹೆಮ್ಮೆ ತಂದಿದ್ದಾಳೆ. 

 

ಈ ಬಗ್ಗೆ ಸ್ವಾತಿ ಹರ್ಷ ವ್ಯಕ್ತಪಡಿಸಿದ್ದು ಹೇಗೆ..?

 

ಈ ಬಗ್ಗೆ ಸಂಭ್ರಮ ವ್ಯಕ್ತಪಡಿಸಿರುವ ಸ್ವಾತಿ ಅವರು `ಮೊದಲಿಗೆ ನನಗೆ ಇದೆಲ್ಲಾ ಬೇಡ ಅಂತ ಕಂಡಿತ್ತು. ಕಾಲೇಜು ಇರುವಾಗ ಓದಿಗೆ ಸಮಸ್ಯೆಯಾಗುತ್ತದೆ ಅಂತ ಭಾವಿಸಿದ್ದೆ. ಆದರೆ ಮನೆಯವರೂ ಧೈರ್ಯ ತುಂಬಿದಾಗ ಸ್ವಲ್ಪ ಯೋಚಿಸಿ ಬಂದ ಅವಕಾಶ ಬಿಡುವುದು ಬೇಡ.ಇದೊಂದು ಸಂದರ್ಭ ನೋಡೋಣ. ತಿಂಗಳಿಗೆ ಒಮ್ಮೆ ಮೀಟಿಂಗ್ ಇರುತ್ತದೆ. ತೊಂದರೆ ಇಲ್ಲ ಎಂದುಕೊಂಡು ಈ ಅವಕಾಶವನ್ನು ಬಳಸಿಕೊಂಡೆ. ಸಾಧ್ಯವಾದಷ್ಟು ರೈತರಿಗೆ ಸಹಾಯ ಮಾಡುವ ಅವಕಾಶ ಬಂದಿದೆ ಅಂತ ಯೋಚಿಸಿ ಒಪ್ಪಿಗೆ ಕೊಟ್ಟೆ. ಈಗ ಆಯ್ಕೆಯಾಗಿದ್ದೇನೆ. ತುಂಬಾ ಖುಷಿಯಾಗಿದೆ. ಮನೆಯವರೂ ಸಂಭ್ರಮದಲ್ಲಿದ್ದಾರೆ' ಎಂದು ಹೇಳಿದ್ದಾರೆ.