ಮಕ್ಕಳ ಮಾರಾಟ ಜಾಲ ಮತ್ತೆ ಆಕ್ಟೀವ್..! ಲಕ್ಷ ಲಕ್ಷ ಹಣಕ್ಕೆ ಹಸುಗೂಸನ್ನು ಮಾರಾಟ ಮಾಡ್ತಿದ್ದ ಖತರ್ನಾಕ್ ಗ್ಯಾಂಗ್..!!

  • 28 Jan 2025 02:44:02 PM

ಬೆಳಗಾವಿ: ಇವತ್ತಿನ ಕಾಲದಲ್ಲಿ ಹಣಕ್ಕಾಗಿ ಜನ ಏನು ಬೇಕಾದರೂ ಮಾಡಲು ಸಿದ್ಧರಿದ್ದಾರೆ. ಕೆಲವರು ಒಳ್ಳೆ ದಾರಿಯಲ್ಲೇ ನಡೆದು, ಕಷ್ಟಪಟ್ಟು ದುಡಿದು ಹಣ ಸಂಪಾದಿಸಲು ಹೆಣಗುತ್ತಿದ್ದರೆ ಇನ್ನೂ ಕೆಲವರು ಅಡ್ಡ ಮಾರ್ಗದಲ್ಲಿ ಹೋಗಿ ಒಂದೇ ಸಲ ದೊಡ್ಡ ಮೊತ್ತದ ಹಣವನ್ನು ಕೊಳ್ಳೆ ಹೊಡೆಯಲು ಹೆಣಗುತ್ತಿರುತ್ತಾರೆ. ಒಟ್ಟಿನಲ್ಲಿ ಈ ಅವ್ಯವಹಾರ, ದಂಧೆಗಳ ಮೂಲ ಉದ್ದೇಶವೇ ಲಾಭ ಗಳಿಸೋದು. ಇದೀಗ ಮಕ್ಕಳ ಅಕ್ರಮ ಮಾರಾಟ ಜಾಲ ಮತ್ತೆ ಸಕ್ರಿಯವಾಗಿದ್ದು ಖತರ್ನಾಕ್ ಗ್ಯಾಂಗೊಂದರ ಕಳ್ಳ ಕೆಲಸ ಬಯಲಾಗಿದೆ. 

 

ಈ ಗ್ಯಾಂಗ್ ಗೆ ಗಂಡನಿಲ್ಲದ ಮಹಿಳೆಯರೇ ಟಾರ್ಗೆಟ್..!!

 

ಗಡಿ ಜಿಲ್ಲೆಯಾದ ಬೆಳಗಾವಿಯಲ್ಲಿ ಯಾರಿಗೂ ಸಣ್ಣ ಸುಳಿವೂ ಸಿಗದಂತೆ ಮಕ್ಕಳ ಮಾರಾಟ ಜಾಲ ಆಕ್ಟೀವ್ ಆಗಿ ಕೆಲಸ ಮಾಡುತ್ತಿದೆ. ನೇರವಾಗಿ ಫೀಲ್ಡಿಗಿಳಿಯದ ಈ ಗ್ಯಾಂಗ್ ಗಂಡ ಇಲ್ಲದ ಮಹಿಳೆಯರನ್ನೇ ಟಾರ್ಗೆಟ್‌ ಮಾಡ್ತಿತ್ತು. ಅವರಿಗೆ ಈ ಗ್ಯಾಂಗ್ 2ನೇ ಮದುವೆ ಮಾಡಿಸಿ ಬಳಿಕ ಅವರ ಮಕ್ಕಳನ್ನ ಗಯಾಬ್ ಮಾಡುತ್ತಿತ್ತು. ಕಳೆದ 1 ತಿಂಗಳಲ್ಲಿ ಬೆಳಗಾವಿ ಜಿಲ್ಲೆಯಲ್ಲಿ ಅದೆಷ್ಟೋ ಮಕ್ಕಳ ಅಕ್ರಮ ಮಾರಾಟ ದಂಧೆ ಸರಾಗವಾಗಿ ನಡೆಯುತ್ತಲೇ ಇದೆ.

 

ಲಕ್ಷ ಲಕ್ಷ ಹಣಕ್ಕೆ ಮಕ್ಕಳನ್ನ ಮಾರಿ ದುಡ್ಡು ಮಾಡುತ್ತಿರುವ ಖತರ್ನಾಕ್ ಖದೀಮರ ಗ್ಯಾಂಗ್ ಇದೀಗ ಪೊಲೀಸರ ಖೆಡ್ಡಾಗೆ ಬಿದ್ದಿದೆ. ಕಳೆದ 1 ತಿಂಗಳಲ್ಲಿ ಮೂರು ಪ್ರಕರಣಗಳು ಬೆಳಕಿಗೆ ಬಂದಿದ್ದು ಈವರೆಗೂ ಮಹಾರಾಷ್ಟ್ರ, ಕರ್ನಾಟಕ, ಗೋವಾ ಸೇರಿ 13 ಜನ ಆರೋಪಿಗಳನ್ನ ವಿವಿಧ ಠಾಣೆ ಪೊಲೀಸರು ಬಂಧಿಸಿದ್ದಾರೆ.

 

ಮಕ್ಕಳನ್ನು ಮಾರಾಟ ಮಾಡಲು ಇವರ ಮಾಸ್ಟರ್ ಪ್ಲ್ಯಾನ್ ಏನ್ ಗೊತ್ತಾ..?

 

ಮದುವೆಯಾಗಿ ಮಕ್ಕಳಿದ್ದು ಪತಿ ಇಲ್ಲದಿರುವ ಮಹಿಳೆಯರನ್ನು ಈ ಗ್ಯಾಂಗ್ ನವರು ಟಾರ್ಗೆಟ್ ಮಾಡ್ತಾರೆ. ಜೀವನ ನಡೆಸಲು ಹರಸಾಹಸ ಪಡುತ್ತಿರುವ, ಕಷ್ಟದಲ್ಲಿರುವ ಮಹಿಳೆಯರಿಗೆ ಮತ್ತೊಂದು ಮದುವೆಯ ಆಸೆ ತೋರಿಸ್ತಾರೆ. ಇದಾದ ಬಳಿಕ 2ನೇ ಮದುವೆ ಕೂಡ ಮಾಡಿಸುತ್ತಾರೆ. ಮದುವೆಯಾದ ಬಳಿಕ ಮಗುವನ್ನು ನಾವು ನೋಡಿಕೊಳ್ತೇವಿ, ಗಂಡ-ಹೆಂಡತಿ ಸ್ವಲ್ಪ ದಿನ ಅರಾಮಾಗಿ ಇರೀ ಎಂದು ಹೇಳಿ ಆ ಮಗುವನ್ನ ತಮ್ಮೊಟ್ಟಿಗೆ ಕರೆದುಕೊಂಡು ಹೋಗುತ್ತಾರೆ.

 

ಹೀಗೆ ಹೋದವರು ಮಹಾರಾಷ್ಟ್ರದಲ್ಲಿರುವ ತಮ್ಮ ಟೀಮ್ ಜೊತೆಗೆ ಸೇರಿಕೊಂಡು ಅಲ್ಲಿ ಮೂರು, ನಾಲ್ಕು ಲಕ್ಷಕ್ಕೆ ಮಗುವನ್ನು ಮಾರಾಟ ಮಾಡ್ತಾರೆ. ಹೀಗೆ ಮಾರಿದ ಬಳಿಕ ಮಗುವಿನ ಸ್ವಂತ ತಾಯಿಯ ಮೊಬೈಲ್ ಸಂಪರ್ಕಕ್ಕೆ ಇವರು ಸಿಗುವುದಿಲ್ಲ. ಈ ರೀತಿ ಮಕ್ಕಳನ್ನು ಮಾರಾಟ ಮಾಡಿ ಬಿಂದಾಸ್ ಜೀವನ ಮಾಡುತಿದ್ದ ಗ್ಯಾಂಗ್ ಕಡೆಗೂ ಪೊಲೀಸರ ಖೆಡ್ಡಾಗೆ ಬಿದ್ದಿವೆ. ಇದೀಗ ಆರೋಪಿಗಳನ್ನು ಪೊಲೀಸರು ಬಂಧಿಸಿ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.