ಪೆರ್ಮುದೆಯಿಂದ ಕಂಬಾರು ಕ್ಷೇತ್ರದತ್ತ ಸಾಗಿದ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ – ಶೋಭಾಯಾತ್ರೆ!

  • 29 Jan 2025 02:04:29 PM

ಪೆರ್ಮುದೆ : ಕಂಬಾರು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಅಷ್ಟಬಂಧ ಬ್ರಹ್ಮ ಕುಂಭಾಭಿಷೇಕ ಹಾಗೂ ಜಟಾಧಾರಿ ಪರಿವಾರ ಸಾನಿಧ್ಯಗಳ ಪುನಃ ಪ್ರತಿಷ್ಠೆ ಕಾರ್ಯಕ್ರಮಗಳ ಅಂಗವಾಗಿ ಪೆರ್ಮುದೆ ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂದಿರದಿಂದ ಮಂಗಳವಾರ ಅಪರಾಹ್ನ ಬೃಹತ್ ಹಸಿರುವಾಣಿ ಹೊರೆ ಕಾಣಿಕೆ ವಿಜೃಂಭಣೆಯಿಂದ ಜರಗಿತು.   

 

ಕುಡಾಲು - ಬಾಡೂರು ಎರಡೂ ಗ್ರಾಮಸ್ಥರ ಹಾಗೂ ಸಂಘ ಸಂಸ್ಥೆ ಸಮಿತಿಗಳ ನೇತೃತ್ವದಲ್ಲಿ ಸಾಗರೋಪಾದಿಯಾಗಿ ಸಾಗಿ ಬಂದ ಈ ಮೆರವಣಿಗೆಯು ಸಿಂಗಾರಿ ಮೇಳ, ಮುತ್ತು ಕೊಡೆ, ಸಮವಸ್ತ್ರಧಾರಿತ ಮಹಿಳೆಯರು ಹಾಗೂ ವಾಹನಗಳಲ್ಲಿ ಸುವಸ್ತು ಸಾಮಾಗ್ರಿಗಳು ಸಾಗಿ ಬಂದವು. 

 

ಪೆರ್ಮುದೆ ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂದಿರದಲ್ಲಿ ಪ್ರಾರ್ಥಿಸಿ ಮೆರವಣಿಗೆಗೆ ಚಾಲನೆಯನ್ನು ನೀಡಲಾಯಿತು. ಕ್ಷೇತ್ರ ಆಡಳಿತ ಸಮಿತಿ, ಜೀರ್ಣೋದ್ಧಾರ, ಬ್ರಹ್ಮಕಲಶೋತ್ಸವ ಸಮಿತಿ ಪದಾಧಿಕಾರಿಗಳು, ಕಾರ್ಯಕರ್ತರುಗಳು ಎಲ್ಲರೂ ಮೆರವಣಿಗೆಗೆ ನೇತೃತ್ವವಹಿಸಿದ್ದರು. 

 

ಸೌಹರ್ದತೆಯೊಂದಿಗೆ ಪೆರ್ಮುದೆ ಚರ್ಚ್ ಹಸಿರುವಾಣಿ 

 

ಪೆರ್ಮುದೆ ಭಜನಾ ಮಂದಿರದಿಂದ ಹೊರಟ ಹಸಿರುವಾಣಿ ಹೊರೆ ಕಾಣಿಕೆ ಮೆರವಣಿಗೆಯು ಪೆರ್ಮುದೆ ಪೇಟೆ ದಾಟಿ ಸಂತ ಲಾರೆನ್ಸರ ಚರ್ಚ್ ನ‌ ಮುಂಭಾಗಕ್ಕೆ ಆಗಮಿಸಿದಾಗ ಚರ್ಚ್ ಧರ್ಮಗುರುಗಳು ಪದಾಧಿಕಾರಿಗಳ ಸಹಿತ ಉಪಸ್ಥಿತರಿದ್ದು ಇಗರ್ಜಿಯ ವತಿಯಿಂದ ಹೊರೆ ಕಾಣಿಕೆಯ ಸಾಮಾಗ್ರಿಗಳನ್ನು ಕಳುಹಿಸಿ ಸೌಹರ್ದತೆಗೆ ಸಾಕ್ಷಿಯಾದರು.