ಕಡಬ|ದೈವದ ಕಾಣಿಕೆ ಡಬ್ಬಿಯ ಹಣವನ್ನೂ ಬಿಡದ ಖದೀಮ..! ಆದಿಮೊಗೇರ್ಕಳ ದೇವಸ್ಥಾನದಲ್ಲಿ ಕಳ್ಳತನ..!

  • 29 Jan 2025 02:44:55 PM

ಕಡಬ: ಇತ್ತೀಚಿನ ದಿನಗಳಲ್ಲಿ ಹಣದ ವ್ಯಾಮೋಹದಿಂದ ಮನುಷ್ಯ ಬೇರೆ ಬೇರೆ ರೀತಿಯ ಅಕ್ರಮ ದಾರಿಗಳನ್ನು ಹಿಡಿಯುತ್ತಿದ್ದಾನೆ. ಕಳ್ಳತನ, ದರೋಡೆ ಪ್ರಕರಣಗಳು ಹೆಚ್ಚಾಗುತ್ತಿದೆ. ಮೊನ್ನೆ ತಾನೇ ಮಂಗಳೂರಿನ ಕೋಟೆಕಾರ್ ಬ್ಯಾಂಕ್ ದರೋಡೆ ಪ್ರಕರಣ ಮಾಸುವ ಮುನ್ನವೇ ಇದೀಗ ಮತ್ತೊಂದು ಕಳ್ಳತನ ಪ್ರಕರಣ ಬೆಳಕಿಗೆ ಬಂದಿದೆ. ಹಣದ ಆಸೆಗಾಗಿ ಮನುಷ್ಯ ಏನು ಬೇಕಾದರೂ ಮಾಡಿಯಾನು ಎಂಬುವುದಕ್ಕೆ ದೈವಸ್ಥಾನದ ಒಳ ಹೊಕ್ಕ ಈ ಕಳ್ಳನೇ ಪ್ರತ್ಯಕ್ಷ ನಿದರ್ಶನ. 

 

ದೈವದ ಕಾರ್ಣಿಕ ಜಾಗದಲ್ಲಿ ನಡೆಯಿತು ಮತ್ತೊಂದು ಕಳ್ಳತನ..!

 

ಹೌದು. ಕಳ್ಳನೋರ್ವ ಕಳ್ಳತನ ಮಾಡುವ ಉದ್ದೇಶದಿಂದ ಮಧ್ಯರಾತ್ರಿ ದೈವಸ್ಥಾನದ ಒಳಹೊಕ್ಕ ಘಟನೆ ಕಡಬದ ಕೋಡಿಂಬಾಳದಲ್ಲಿ ನಡೆದಿದೆ. ಇಲ್ಲಿಯ ಆದಿಮೊಗೇರ್ಕಳ ದೈವಸ್ಥಾನದಲ್ಲಿ ಮತ್ತೊಂದು ಕಳ್ಳತನವಾಗಿದ್ದು ಕಳ್ಳನ ಎಲ್ಲಾ ಚಲನವಲನ ಸಿಸಿಟಿವಿಯಲ್ಲಿ ಸೆರೆಯಾಗಿದೆ. ದೈವ ದೇವರ ಕಾರ್ಣಿಕ ಶಕ್ತಿಯನ್ನು ಅಪಾರವಾಗಿ ನಂಬುವ, ಭಕ್ತಿ- ಭಯದಿಂದ ಆರಾಧಿಸುವ ದ.ಕ ಜಿಲ್ಲೆಯಲ್ಲೂ ಇಂತಹ ಪ್ರಕರಣಗಳು ನಡೆಯುತ್ತಿರೋದು ವಿಪರ್ಯಾಸ. 

 

ದೈವಸ್ಥಾನಕ್ಕೆ ಸಿಸಿಟಿವಿ ಅಳವಡಿಸಿದ್ದರೂ ಡೋಂಟ್ ಕೇರ್..!!

 

ದೈವಸ್ಥಾನದಲ್ಲಿ ಈ ಹಿಂದೆ ಅನೇಕ ಬಾರಿ ಕಳ್ಳತನ ಪ್ರಕರಣಗಳು ನಡೆಯುತ್ತಿದ್ದರಿಂದ ಆಡಳಿತ ಮಂಡಳಿ ಸಿಸಿ ಕ್ಯಾಮೆರಾವನ್ನು ಅಳವಡಿಸಿತ್ತು. ಆದರೆ ಅದರ ಬಗ್ಗೆ ಕ್ಯಾರೇ ಇಲ್ಲದ ಖದೀಮರು ಮತ್ತೆ ದೈವಸ್ಥಾನದ ಕಾಣಿಕೆ ಡಬ್ಬಿಗೆ ಕನ್ನ ಹಾಕುತ್ತಿದ್ದಾರೆ. ಈ ಬಾರಿ ಕಳ್ಳನೋರ್ವ ಕಳ್ಳತನ ಮಾಡುತ್ತಿರುವ ಸಂಪೂರ್ಣ ದೃಶ್ಯ ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿದ್ದು ಈ ಆಧಾರದಲ್ಲಿ ಕಡಬ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.