ಬಂಟ್ವಾಳ: ಪಕ್ಕದ ಮನೆಯ ಅಪ್ರಾಪ್ತ ಬಾಲಕಿಯನ್ನು ನಿರಂತರ ಅತ್ಯಾಚಾರ ಮಾಡುವ ಮೂಲಕ ಗರ್ಭಿಣಿ ಮಾಡಿದ ಕಾಮುಕ ಸಾದಿಕ್ ಎಂಬಾತನಿಗೆ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ 20 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಹಾಗೂ 50 ಸಾವಿರ ದಂಡ ವಿಧಿಸಿ ಆದೇಶ ಹೊರಡಿಸಿದೆ.ಈ ಪ್ರಕರಣದಲ್ಲಿ ಮಗುವಿನ ಡಿ.ಎನ್.ಎ ಪ್ರಮುಖ ಸಾಕ್ಷಿಯಾಗಿತ್ತು. ಈ ಬಗೆಗಿನ ಸಂಪೂರ್ಣ ಮಾಹಿತಿ ಇಲ್ಲಿದೆ.
ಏನಿದು ಪ್ರಕರಣ!
ಬಂಟ್ವಾಳ ತಾಲೂಕಿನ ಬಿ.ಮೂಡ ಗ್ರಾಮದ ಗೂಡಿನಬಳ ನಿವಾಸಿ ಸಾದೀಕ್ (24) ಎಂಬಾತ ಪಕ್ಕದ ಮನೆಯ ಅಪ್ರಾಪ್ತ ಬಾಲಕಿಯೊಂದಿಗೆ ಸ್ನೇಹ ಬೆಳೆಸಿದ್ದ. ಬಳಿಕ ಆಕೆಯ ನಂಬರ್ ಪಡೆದು ಪ್ರೀತಿಯ ನಾಟಕವಾಡಿದ್ದ. 2023ರಲ್ಲಿ ಒಮ್ಮೆ ಆಕೆಯ ತಾಯಿ ಅನಾರೋಗ್ಯಕ್ಕೀಡಾದಾಗ ಮನೆಗೆ ತೆರಳಿದ ಸಾದೀಕ್ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದ. ಬಳಿಕ ಇದೇ ರೀತಿ ಹಲವು ಬಾರಿ ಅತ್ಯಾಚಾರ ನಡೆಸಿ ಆಕೆ ಗರ್ಭಿಣಿಯಾದಾಗ ತಲೆ ಮರೆಸಿಕೊಂಡಿದ್ದ.
ಸಾಕ್ಷಿ ನುಡಿದ ಡಿ.ಎನ್.ಎ ವರದಿ!
ಈ ಪ್ರಕರಣವಾದ ಬಳಿಕ ಸಾದೀಕ್ ಅತ್ಯಾಚಾರ ಆರೋಪವನ್ನು ನಿರಾಕರಿಸಿದ್ದ. ಈ ನಡುವೆ ಅತ್ಯಾಚಾರಕ್ಕೊಳಗಾದ ಬಾಲಕಿ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ. ತನಿಖೆ ನಡೆಸಿದ ಪೊಲೀಸರು ಬಾಲಕಿಯ ಮಗುವಿನ ಡಿ.ಎನ್.ಎ ಪರೀಕ್ಷೆ ನಡೆಸಿದ್ದು ಈ ವೇಳೆ ಸಾದೀಕ್ ಮಗುವಿನ ಜೈವಿಕ ತಂದೆ ಎಂಬುದು ದೃಢಪಟ್ಟಿದೆ. ಸದ್ಯ, ಸಾದೀಕ್ ಜೈಲು ಪಾಲಾಗಿದ್ದು ಆತನಿಗೆ 20 ವರ್ಷ ಜೈಲು ಹಾಗೂ ದಂಡ ವಿಧಿಸಲಾಗಿದೆ.