ವೈದ್ಯ ನಾರಾಯಣ ಹರಿ ಎಂಬ ಮಾತಿದೆ. ವೈದ್ಯರನ್ನು ನಾವು ದೇವರಂತೆ ಕಾಣುತ್ತೇವೆ. ಯಾವುದೇ ರೀತಿಯ ಅನಾರೋಗ್ಯಕ್ಕೆ ಈಡಾದರೆ ನಮಗೆ ಮೊದಲು ನೆನಪಾಗೋದೇ ವೈದ್ಯರು. ಸಮಾಜದಲ್ಲಿ ಜನರು ಅತ್ಯಂತ ಗೌರವ ಭಾವದಿಂದ ನೋಡುವ ಅವರೇ ಆರೋಗ್ಯದ ವಿಚಾರದಲ್ಲಿ, ಚಿಕಿತ್ಸೆ ನೀಡುವ ವಿಚಾರದಲ್ಲಿ ಉದಾಸೀನತೆ ತೋರಿದರೆ ಹೇಗೆ ಹೇಳಿ..? ಇದೇ ರೀತಿ ವೈದ್ಯರ ಬೇಜವಾಬ್ದಾರಿಯಿಂದ ರೋಗಿಯೊಬ್ಬರು ಮೃತಪಟ್ಟ ಆಘಾತಕಾರಿ ಘಟನೆಯೊಂದು ನಡೆದಿದೆ.
ಚಿಕಿತ್ಸೆ ನೀಡಬೇಕಾದ ವೈದ್ಯ ರೀಲ್ಸ್ ನೋಡೋದ್ರಲ್ಲೇ ಬ್ಯುಸಿ..!!
ಚಿಕಿತ್ಸೆ ವೇಳೆ ಡಾಕ್ಟರ್ ಮೊಬೈಲ್‌ನಲ್ಲಿ ರೀಲ್ಸ್ ನೋಡುತ್ತಾ ಕುಳಿತ್ತಿದ್ದು, ಅಲ್ಲಿದ್ದ ರೋಗಿ ಹೃದಯಾಘಾತದಿಂದ ಸಾವನ್ನಪ್ಪಿದ ಆಘಾತಕಾರಿ ಘಟನೆ ನಡೆದಿದೆ. ಪರ್ವೇಶ್ ಕುಮಾರಿ (60) ಮೃತಪಟ್ಟ ವ್ಯಕ್ತಿ ಎಂದು ಗುರುತಿಸಲಾಗಿದೆ. ಮೃತ ಮಹಿಳೆ ಅನಾರೋಗ್ಯಕ್ಕೀಡಾಗಿ ಮೈನ್ಪುರಿ ಜಿಲ್ಲಾ ಆಸ್ಪತ್ರೆಯ ತುರ್ತು ವಾರ್ಡ್ನಲ್ಲಿ ಅಡ್ಮಿಟ್ ಆಗಿದ್ದರು. ಈ ವೇಳೆ ವೈದ್ಯನೊಬ್ಬ ಚಿಕಿತ್ಸೆ ಕೊಡುವ ಬದಲು ಎದುರಿಗೆ ಕೂತು ಮೊಬೈಲ್‌ನಲ್ಲಿಯೇ ಮುಳುಗಿ ಹೋಗಿದ್ದ.
ಆ ಸಮಯ 15 ನಿಮಿಷಗಳ ಕಾಲ ಚಿಕಿತ್ಸೆಯ ಕೊರತೆಯಾಗಿದೆ. ಹಾಗಾಗಿ ಮಲಗಿದ್ದ ಮಹಿಳೆ ಚಿರನಿದ್ರೆಗೆ ಜಾರಿದ್ದಾಳೆ. ‘ಒಂದು ವೇಳೆ ವೈದ್ಯರು ಸರಿಯಾದ ಸಮಯಕ್ಕೆ ಚಿಕಿತ್ಸೆ ನೀಡಿದ್ದರೆ ಪರ್ವೇಶ್ ಕುಮಾರಿ ಬದುಕುತ್ತಿದ್ದಳು’ ಎಂದು ಕುಟುಂಬಸ್ಥರು ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.
ವೈದ್ಯರ ಬೇಜವಾಬ್ದಾರಿತನದ ಸಿಸಿಟಿವಿ ದೃಶ್ಯ ಫುಲ್ ವೈರಲ್..!!
ಈ ಘಟನೆಯ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಫುಲ್ ವೈರಲ್ ಆಗುತ್ತಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ದಾದಿಯರು ರೋಗಿಗೆ ಚಿಕಿತ್ಸೆ ನೀಡುತ್ತಿದ್ದು, ಡಾಕ್ಟರ್ ರೀಲ್ಸ್ ನೋಡುತ್ತಾ ಹಾಯಾಗಿ ಕುಳಿತಿರುವ ಘಟನೆ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಸಕಾಲಕ್ಕೆ ಚಿಕಿತ್ಸೆ ದೊರಕದೆ ಮಹಿಳೆ ಮೃತಪಟ್ಟಿದ್ದು, ವೈದ್ಯರ ವಿರುದ್ಧ ಮಹಿಳೆಯ ಕುಟುಂಬಸ್ಥರು ದೂರು ನೀಡಿದ್ದಾರೆ. ಪೊಲೀಸರು ಘಟನೆ ಕುರಿತು ಪರಿಶೀಲನೆ ನಡೆಸುತ್ತಿದ್ದಾರೆ. ವೈದ್ಯರನ್ನೇ ನಂಬಿ ಬರುವ ರೋಗಿಗಳ ವಿಚಾರದಲ್ಲಿ ವೈದ್ಯರು ತಮ್ಮ ಶ್ರದ್ಧೆ, ಕರ್ತವ್ಯನಿಷ್ಠೆಯನ್ನು ಪಾಲಿಸಬೇಕಾಗಿದೆ. ಇಂತಹ ಉದಾಸೀನತೆ, ಬೇಜವಾಬ್ದಾರಿತನ ಮತ್ತಷ್ಟು ಸಾವುಗಳಿಗೆ ಕಾರಣವಾಗಬಹುದು..