ಬೆಂಗಳೂರು: ಈ ಆಧುನಿಕ ಯುಗದಲ್ಲಿ ಸಣ್ಣ ಮಗುವಿನಿಂದ ಹಿಡಿದು ವೃದ್ಧರವರೆಗೆ ಎಲ್ಲರೂ ಮೊಬೈಲ್ ಗೆ ಹೆಚ್ಚು ಅವಲಂಬಿತರಾಗಿದ್ದಾರೆ. ಊಟವಾದರೂ ಬಿಟ್ಟಾರೂ ಮೊಬೈಲ್ ನಲ್ಲ. ಶಾಲೆ ಕಲಿಯುವ ಮಕ್ಕಳಿಗಂತೂ ಸ್ಮಾರ್ಟ್ಫೋನ್ ಬಳಕೆ ಒಂದು ಚಟವಾಗಿಬಿಟ್ಟಿದೆ. ಅತಿಯಾದರೆ ಅಮೃತವೂ ವಿಷ ಎಂಬಂತೆ ಅತಿಯಾದ ಮೊಬೈಲ್ ಹುಚ್ಚು ಒಂದು ಜೀವವನ್ನೇ ಬಲಿ ತೆಗೆದುಕೊಳ್ಳಬಹುದು ಎಂಬುವುದಕ್ಕೆ ಇದೇ ಜ್ವಲಂತ ನಿದರ್ಶನ.
ಬಾಲಕನ ಪಾಲಿಗೆ ಯಮನಾದ ಮೊಬೈಲ್...!!
ಮೊಬೈಲ್ ಗೀಳಿನಿಂದಾಗಿ ಹದಿಮೂರು ವರ್ಷದ ಬಾಲಕನೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಬೆಂಗಳೂರಿನ ಬ್ಯಾಡರಹಳ್ಳಿ ಸಮೀಪದ ಗೊಲ್ಲರಹಟ್ಟಿಯ ರತ್ನನಗರದಲ್ಲಿ ನಡೆದಿದೆ. ಧ್ರುವ ಆತ್ಮಹತ್ಯೆಗೆ ಶರಣಾದ ಬಾಲಕ. ತನ್ನ ಒಂಭತ್ತು ವರ್ಷದ ತಂಗಿಯ ಎದುರೇ ಆತ ನೇಣು ಹಾಕಿಕೊಳ್ಳುತ್ತಿದ್ದರೂ ಈತ ಏನು ಮಾಡುತ್ತಿದ್ದಾನೆ ಎಂಬ ಅರಿವೂ ಅವಳಿಗಿರಲಿಲ್ಲ. ಬಾಲಕನ ತಂದೆ ಬಸವರಾಜ್ ಬೇಕರಿಯಲ್ಲಿ ಕೆಲಸ ಮಾಡುತ್ತಿದ್ದು ತಾಯಿ ಗಾರ್ಮೆಂಟ್ಸ್ ನಲ್ಲಿ ಕೆಲಸ ಮಾಡುತ್ತಿದ್ದರು. ಇಬ್ಬರೂ ಇಲ್ಲದಿದ್ದಾಗ ಮನೆಯಲ್ಲಿ ಅಣ್ಣ ತಂಗಿ ಇಬ್ಬರೇ ಇರುತ್ತಿದ್ದರು.
ಸೊಂಟದ ಉಡದಾರ ಫ್ಯಾನಿಗೆ ಕಟ್ಟಿ ಜೀವಾಂತ್ಯಗೊಳಿಸಿದ ಧ್ರುವ..!
ಶಾಲೆ ಮುಗಿಸಿ ಬಂದ ಬಾಲಕ ಸಂಜೆ ಏಳು ಗಂಟೆಗೆ ಸೊಂಟದ ಉಡದಾರವನ್ನು ಫ್ಯಾನಿಗೆ ಕಟ್ಟಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಉಡದಾರ ಕುತ್ತಿಗೆಗೆ ಬಿಗಿದು ತುಂಡಾಗಿ ಬಾಲಕ ಕೆಳಗೆ ಬಿದ್ದಿದ್ದಾನೆ. ಅಷ್ಟರಲ್ಲಿ ತಾಯಿ ಮನೆಗೆ ಬಂದಿದ್ದು ಬಿದ್ದಿದ್ದ ಬಾಲಕನನ್ನು ನೋಡಿ ಆತಂಕಗೊಂಡು ಕೂಡಲೇ ನೆರೆಹೊರೆಯವರ ಸಹಾಯದಿಂದ ಆಸ್ಪತ್ರೆಗೆ ಸೇರಿಸಿದ್ದಾರೆ. ಆದರೆ ಅಷ್ಟರಲ್ಲೇ ಆತ ಅಸುನೀಗಿದ್ದ. ಪೊಲೀಸರು ಬಾಲಕನ ಆತ್ಮಹತ್ಯೆಗೆ ನಿಖರವಾದ ಕಾರಣವನ್ನು ಪತ್ತೆ ಹಚ್ಚಲು ತನಿಖೆ ಮಾಡುತ್ತಿದ್ದಾರೆ.