ಮಂಗಳೂರು:ನಗರಗಳಲ್ಲಿ ಯಾವುದಾದರೂ ಒಂದು ರಸ್ತೆಯಿರಲಿ, ಸರ್ಕಲ್ ಇರಲಿ ಅದಕ್ಕೆ ತನ್ನದೇ ಆದಂತಹ ಹೆಸರುಗಳಿರುತ್ತದೆ. ಊರ ದಿಗ್ಗಜರ, ಸ್ವಾತಂತ್ಯ ಹೋರಾಟಗಾರರ, ಧರ್ಮ ಪ್ರತಿಪಾದಕರ ಅಥವಾ ಸಾಧಕರ ಹೆಸರಿನಿಂದಲೇ ಆ ವೃತ್ತ, ಅಥವಾ ರಸ್ತೆ ಹೆಸರುವಾಸಿಯಾಗಿರುತ್ತದೆ.
ಅದೇ ರೀತಿ ಮಂಗಳೂರಿನ ಪಂಪ್ವೆಲ್ ಸರ್ಕಲ್ ಕೂಡಾ ವರುಷಗಳ ಹಿಂದೆ ಸ್ಥಾಪಿಸಲಾಗಿದ್ದ ಕಲಶದಿಂದಲೇ ಖ್ಯಾತಿ ಪಡೆದುಕೊಂಡಿತ್ತು. ದೊಡ್ಡದಾದ ಕಲಶ ಕಂಡರೆ ಸಾಕು ಬೇರೆ ರಾಜ್ಯದವರೂ ಇದು ಪಂಪ್ವೆಲ್ ಎಂದು ಗುರುತು ಹಿಡಿಯುತ್ತಿದ್ದರು. ನಂತರ ಅದನ್ನು ತೆಗೆದುಹಾಕಲಾಗಿತ್ತು. ಆದರೆ ಇದೀಗ ಕರಾವಳಿಗರಿಗೆ ಶುಭ ಸುದ್ದಿಯೊಂದು ಸಿಕ್ಕಿದೆ. ಮತ್ತೆ ಕಲಶ ಅನಾವರಣಕ್ಕೆ ಮಂಗಳೂರು ಸಜ್ಜಾಗಿದೆ.
ಪಂಪ್ವೆಲ್ ಸರ್ಕಲ್ ನಲ್ಲಿ ಎರಡು ತಿಂಗಳ ಒಳಗೆ ಕಲಶ ನಿರ್ಮಾಣ...!!
ಹೌದು. ದಶಕದ ಹಿಂದೆ ಇದ್ದ ಪಂಪ್ವೆಲ್ ನ ಗತವೈಭವ ಮತ್ತೆ ರಾರಾಜಿಸಲಿದೆ. ಕಲಶ ಮರುಸ್ಥಾಪನೆಗೆ ಈಗಾಗಲೇ ಚಿಂತನೆಗಳು ನಡೆಯುತ್ತಿದ್ದು ಇನ್ನು ಎರಡು ತಿಂಗಳ ಒಳಗಾಗಿ ಈ ಹಿಂದೆ ಇದ್ದ ರೀತಿಯಲ್ಲೇ ಕಲಶ ನಿರ್ಮಾಣ ಆಗಲಿದೆ. ಸದ್ಯ ಆರಂಭಿಕ ಕಾಮಗಾರಿಗೆ ಚಾಲನೆ ಸಿಕ್ಕಿದ್ದು ಜೈನ್ ಸೊಸೈಟಿ ಮಂಗಳೂರು ಮತ್ತು ಸ್ಮಾರ್ಟ್ ಸಿಟಿ ಲಿಮಿಟೆಡ್ ನಿಂದ ಕಾಮಗಾರಿ ನಡೆಯಲಿದೆ.
ಪಂಪ್ವೆಲ್ ನಿಂದ ಗರೋಡಿ ಕಡೆಗೆ ಹೋಗುವ ರಸ್ತೆಯಲ್ಲೇ ಇರುವ ಟ್ರಾಫಿಕ್ ಐಲ್ಯಾಂಡ್ ನಲ್ಲೇ ಕಲಶ ನಿರ್ಮಾಣ ಆಗಲಿದೆ. ಸ್ಮಾರ್ಟ್ ಸಿಟಿಯಿಂದ ಕಟ್ಟೆ ಕೆಲಸ ನಡೆಯುತ್ತಿದ್ದು ನಂತರ ಜೈನ್ ಸೊಸೈಟಿಯಿಂದ ಕಲಶ ಸ್ಥಾಪನೆಯ ಕೆಲಸ ಆಗಲಿದೆ. ಈ ಹಿಂದೆ ಇದ್ದಂತೆ ಓವೆಲ್ ಆಕಾರದಲ್ಲಿಯೇ ಕಲಶ ನಿರ್ಮಾಣ ಆಗಲಿದೆ. ಅಲ್ಲಿ ಮಹಾವೀರ ವೃತ್ತ ಎಂಬ ನಾಮಫಲಕವೂ ಹೊಸ ಮೆರುಗು ನೀಡಲಿದೆ.
9 ವರ್ಷಗಳ ಬಳಿಕ ಮರುಸ್ಥಾಪನೆಯಾಗುತ್ತಿದೆ ಪಂಪ್ವೆಲ್ ಕಲಶ...!!
2016ರಲ್ಲಿ ತೆರವುಗೊಳಿಸಿದ ಕಲಶವನ್ನು ಅಲ್ಲೇ ಕಂಕನಾಡಿ ತೆರವು ಸರ್ಕಲ್ ಬಳಿ ಇಡಲಾಗಿತ್ತು. ಕಲಶ ನಿರ್ಮಾಣ ಕಾರ್ಯ ಸದ್ಯದಲ್ಲೇ ಮತ್ತೆ ಆರಂಭಿಸಲಾಗುವುದು ಎಂದು ಅದೆಷ್ಟೋ ವರ್ಷಗಳಿಂದ ಜನಪ್ರತಿನಿಧಿಗಳು ಹೇಳುತ್ತಲೇ ಬರುತ್ತಿದ್ದರು. ಅದಕ್ಕೆ ಈಗ ಕಾಲ ಕೂಡಿ ಬಂದಿದೆ.
ತೆರವುಗೊಳಿಸಿಟ್ಟ ಕಲಶದ ಕೆಲವು ಕಡೆಗಳಲ್ಲಿ ಹಾನಿ ಉಂಟಾಗಿದ್ದು ಅದೇ ಕಲಶವನ್ನು ಸರಿಪಡಿಸಿ ಮರು ನಿರ್ಮಾಣ ಮಾಡಲಾಗುವುದು ಎಂದು ಕಾಮಗಾರಿಯ ಮುಖಂಡರು ಮಾಹಿತಿ ನೀಡಿದ್ದಾರೆ.