ಕಲಿಕೆಯ ಆಸೆಯಿಂದ ಪ್ರೀತಿ ನಿರಾಕರಿಸಿದ್ದೇ ತಪ್ಪಾಯ್ತ..? ಹಾಡುಹಗಲೇ ವಿದ್ಯಾರ್ಥಿನಿಯ ಕತ್ತು ಸೀಳಿ ಹತ್ಯೆ ಮಾಡಿದ ಮುಬಿನ್...!!

  • 31 Jan 2025 01:37:20 PM

ರಾಯಚೂರು: ಇವತ್ತಿನ ಕಾಲಘಟ್ಟದಲ್ಲಿ ಪ್ರೀತಿ ಎಂಬುವುದು ತನ್ನ ಅರ್ಥವನ್ನೇ ಕಳೆದುಕೊಂಡಿದೆ. ಪ್ರೀತಿಸಿದವರ ಪ್ರೀತಿ ನಿರಾಕರಿಸಿದಾಗ ಎಲ್ಲೆಂದರಲ್ಲೇ ಪ್ರೀತಿಸಿದವರೇ ಹತ್ಯೆ ಮಾಡೋದು ಇದೆಂಥಾ ಪ್ರೀತಿ ಹೇಳಿ. ಪ್ರೀತಿಯ ನಿಜವಾದ ಅರ್ಥ, ಅದರ ಮೌಲ್ಯ ತಿಳಿಯದ ಅದೆಷ್ಟೋ ಭೂಪರು ಅದನ್ನು ತಮ್ಮ ಸ್ವಾರ್ಥಕ್ಕೆ ಹೇಗೆ ಬೇಕೋ ಹಾಗೆ ಬಳಸಿಕೊಳ್ಳುತ್ತಿದ್ದಾರೆ. ಅಂತಹುದೇ ಅಮಾನವೀಯ ಘಟನೆಯೊಂದು ರಾಯಚೂರಿನಲ್ಲಿ ನಡೆದಿದೆ.

 

ಯುವಕನ ಪ್ರೇಮನಿವೇದನೆ ತಿರಸ್ಕಾರ, ಕುತ್ತಿಗೆ ಸೀಳಿ ಹತ್ಯೆ ಮಾಡಿಬಿಟ್ಟ ಮುಬಿನ್...!!

 

ನಾನು ನಿನ್ನನ್ನು ಈಗ ಮದುವೆಯಾಗಲು ಸಾಧ್ಯವಿಲ್ಲ. ನನಗೆ ಇನ್ನೂ ಓದಬೇಕು ಎಂದು ಹೇಳಿ ಯುವಕನೋರ್ವ ಮಾಡಿದ್ದ ಲವ್ ಪ್ರಪೋಸಲ್ ಅನ್ನು ನಿರಾಕರಿಸಿದ ಡಿಗ್ರಿ ವಿದ್ಯಾರ್ಥಿನಿಯೋರ್ವಳನ್ನು ಹಾಡಹಗಲೇ ನಡುರಸ್ತೆಯಲ್ಲಿ ಯುವಕನೊಬ್ಬ ಕುತ್ತಿಗೆ ಸೀಳಿ ಹತ್ಯೆ ಮಾಡಿದ ಹೃದಯವಿದ್ರಾವಕ ಘಟನೆ ರಾಯಚೂರಿನ ಸಿಂಧನೂರಿನಲ್ಲಿ ನಡೆದಿದೆ. ಇಪ್ಪತ್ತೆರಡು ವರ್ಷದ ವಿದ್ಯಾರ್ಥಿನಿ ಶಿಫಾ ಹತ್ಯೆಯಾದ ವಿದ್ಯಾರ್ಥಿನಿಯಾಗಿದ್ದಾಳೆ.

 

ಲಿಂಗಸೂಗೂರು ಮೂಲದ ಮುಬಿನ್ ಕೊಲೆ ಮಾಡಿದ ಆರೋಪಿ. ಶಿಫಾ ಸಿಂಧನೂರಿನ ಸರ್ಕಾರಿ ಕಾಲೇಜಿನಲ್ಲಿ ಎಂಎಸ್ಸಿ ಓದುತ್ತಿದ್ದಳು. ಆಕೆ ಕಾಲೇಜಿಗೆ ಹೋಗುವ ಸಂದರ್ಭ ಈತ ನಡುರಸ್ತೆಯಲ್ಲೇ ಹತ್ಯೆಗೈದಿದ್ದಾನೆ ಎಂಬ ಶಂಕೆ ವ್ಯಕ್ತವಾಗಿದೆ. ಸಿಂಧನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

ತಾನೇ ಹತ್ಯೆ ಮಾಡಿರುವುದಾಗಿ ಸತ್ಯ ಒಪ್ಪಿಕೊಂಡ ಮುಬಿನ್..!!

 

ಈ ಕೇಸಿನ ಜಾಡು ಹಿಡಿದು ಹೊರಟ ಪೊಲೀಸರ ಬಲೆಗೆ ಮುಬಿನ್ ಬಿದ್ದಿದ್ದಾನೆ. ಆರಂಭದಲ್ಲಿ ಕೊಲೆಗೆ ನಿಖರವಾದ ಕಾರಣ ತಿಳಿದುಬಂದಿರಲಿಲ್ಲ. ನಂತರ ಅವನನ್ನು ಠಾಣೆಗೆ ಕರೆಯಿಸಿ ವಿಚಾರಣೆ ನಡೆಸಿದಾಗ ಆತ ಎಲ್ಲಾ ಸತ್ಯವನ್ನು ಬಾಯ್ಬಿಟ್ಟಿದ್ದಾನೆ. ನನಗೆ ಸಿಗದ ಆಕೆ ಇನ್ನಾರಿಗೂ ಸಿಗಬಾರದು ಎಂಬ ಉದ್ದೇಶದಿಂದ ಕೊಲೆ ಮಾಡಿರುವುದಾಗಿ ಹೇಳಿದ್ದಾನೆ. ಇದೀಗ ಈತನನ್ನು ಕೋರ್ಟ್ ಗೆ ಹಾಜರುಪಡಿಸಲಾಗಿದೆ.