ಪಶ್ಚಿಮ ಬಂಗಾಳ: ಪ್ರೀತಿಗೆ ಕಣ್ಣಿಲ್ಲ, ಅದಕ್ಕೆ ವಯಸ್ಸಿನ ಮಾನದಂಡವಿಲ್ಲ. ಅರ್ಥೈಸಿಕೊಳ್ಳುವ ಮನಸ್ಸಿದ್ದರೆ ಸಾಕು ಎಂಬಂತಹ ಅನೇಕ ರೀತಿಯ ಪರಿಕಲ್ಪನೆಗಳಿವೆ. ಇತ್ತೀಚೆಗೆ ವೃದ್ಧನನ್ನು ಇಪ್ಪತ್ತರ ತರುಣಿ, ವಯಸ್ಸಾದ ಆಂಟಿಯ ಹಿಂದೆ ಬಿದ್ದ ಯುವಕ, ವಿದ್ಯಾರ್ಥಿಯನ್ನೇ ವರಿಸುವ ಶಿಕ್ಷಕಿ ಹೀಗೆ ಹೇಗೇಗೋ ಮದುವೆ ನಡೆಯುತ್ತಿರುತ್ತದೆ. ಅಂತಹುದೇ ಅಪರೂಪದ ಘಟನೆಯೊಂದು ನಡೆದಿದೆ.
ತರಗತಿಯಲ್ಲೇ ವಿದ್ಯಾರ್ಥಿಯನ್ನು ಮದ್ವೆಯಾದ ಪ್ರಾಧ್ಯಾಪಕಿ...!
ಪ್ರಾಧ್ಯಾಪಕಿಯೊಬ್ಬರು ತನ್ನ ಕಾಲೇಜಿನ ತರಗತಿ ಕೋಣೆಯಲ್ಲೇ ವಿದ್ಯಾರ್ಥಿಯನ್ನು ವಿವಾಹವಾದ ಅಚ್ಚರಿಕರ ಘಟನೆ ನಡೆದಿದ್ದು ಇದಕ್ಕೆ ಸಂಬಂಧಿಸಿದ ವೀಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದ್ದು ತನಿಖೆಗೆ ಆದೇಶವನ್ನು ಹೊರಡಿಸಲಾಗಿದೆ. ಪಶ್ಚಿಮ ಬಂಗಾಳದಲ್ಲಿ ಈ ಘಟನೆ ನಡೆದಿದೆ. ಹರಿಗಂಟಾ ಟೆಕ್ನಾಲಜಿ ಕಾಲೇಜಿನ ಸೈಕಾಲಜಿ ವಿಭಾಗದಲ್ಲಿ ಈ ಘಟನೆ ನಡೆದಿದೆ. ಮೌಲಾನಾ ಅಬ್ದುಲ್ ಕಲಾಂ ಆಜಾದ್ ಯೂನಿವರ್ಸಿಟಿ ಆಫ್ ಟೆಕ್ನಾಲಜಿ ಅಡಿಯಲ್ಲಿ ಈ ಕಾಲೇಜು ಕಾರ್ಯ ನಿರ್ವಹಿಸುತ್ತಿದೆ.
ವೈರಲ್ ವೀಡಿಯೋದಲ್ಲಿ ಏನಿದೆ..?
ಪ್ರೊಫೆಸರ್ ಪಾಯಲ್ ಬ್ಯಾನರ್ಜಿ ವಧುವಿನ ಉಡುಗೆ ತೊಟ್ಟು ಹೂಮಾಲೆ ಧರಿಸಿರುವ ದೃಶ್ಯ ವೀಡಿಯೋದಲ್ಲಿದೆ. ಹೂಮಾಲೆಯನ್ನೂ ವಿನಿಯಮ ಮಾಡಿಕೊಂಡಿದ್ದಾರೆ. ಪವಿತ್ರ ಅಗ್ನಿಯನ್ನು ಸಾಂಕೇತಿಸುವ ಮೇಣದ ಬತ್ತಿಯ ಸುತ್ತ ಇವರು ಏಳು ಹೆಜ್ಜೆ ಹಾಕುತ್ತಿದ್ದಾರೆ. ಆದರೆ ಇದು ನಿಜವಾದ ಮದ್ವೆಯಲ್ಲ, ಶೈಕ್ಷಣಿಕ ಉದ್ದೇಶಕ್ಕಾಗಿ ಮಾಡಿದ ಮಾದರಿ ಎಂದು ಸ್ಪಷ್ಟಪಡಿಸಿದ್ದಾರೆ.