ಮಂಗಳೂರು: ಸಾಮಾಜಿಕ ಜಾಲತಾಣವನ್ನು ಪ್ರತಿಯೊಬ್ಬ ವಯಸ್ಕನೂ ಸಕ್ರಿಯವಾಗಿ ಬಳಸುವ ಈ ಕಾಲಘಟ್ಟದಲ್ಲಿ ನಿಂದನೆಗಳು, ಆರೋಪಗಳು, ಟೀಕೆಗಳಿಗೂ ಅದು ವೇದಿಕೆಯನ್ನು ಕಲ್ಪಿಸುತ್ತದೆ. ವಾಟ್ಸಾಪ್ ನಲ್ಲಿ ಏನಾದರೊಂದು ಶೀರ್ಷಿಕೆ ಇಟ್ಟು ಗ್ರೂಪ್ ರಚಿಸಿ ಒಬ್ಬ ವ್ಯಕ್ತಿಯನ್ನು ಹೇಗೆ ಬೇಕೋ ಹಾಗೆ ನಿಂದಿಸಿ ವಿಕೃತ ಮನರಂಜನೆ ಪಡೆದುಕೊಳ್ಳುವುದೂ ಸಾಮಾನ್ಯವಾಗಿಬಿಟ್ಟಿದೆ. ಇದೀಗ ಮಂಗಳೂರಿನ ಖ್ಯಾತ ಬಿಲ್ಡರ್ ಮೇಲೆ ಮಹಿಳೆಯನ್ನು ಅವಾಚ್ಯ ಶಬ್ಧಗಳಿಂದ ನಿಂದಿಸಿರುವ ಆರೋಪವೊಂದು ಕೇಳಿಬಂದಿದೆ.
ಜಿತೇಂದ್ರ ಕೊಟ್ಟಾರಿ ವಿರುದ್ಧ ಬರ್ಕೆ ಠಾಣೆಯಲ್ಲಿ ಪ್ರಕರಣ ದಾಖಲು..!!
ಪ್ರಸನ್ನ ರವಿ ಮಂಗಳೂರಿನಲ್ಲಿ ಸಾಮಾಜಿಕ ಸಮಸ್ಯೆಗಳ ಬಗ್ಗೆ, ಅನ್ಯಾಯ-ಅಕ್ರಮಗಳ ಬಗ್ಗೆ ಧ್ವನಿ ಎತ್ತುವಂತಹ ಮಹಿಳೆ
ಇದೀಗ ಸಾಮಾಜಿಕ ಕಾರ್ಯಕರ್ತೆ ಪ್ರಸನ್ನ ರವಿ ಅವರನ್ನು ಜಿತೇಂದ್ರ ಕೊಟ್ಟಾರಿ ಅವರು ಅವಾಚ್ಯ ಶಬ್ಧಗಳಿಂದ ನಿಂದಿಸಿ ಮಾನಹಾನಿ ಮಾಡಿರುವುದರ ಬಗ್ಗೆ ಆರೋಪಿಸಿ ಮಂಗಳೂರಿನ ಆರನೇ ಜೆಎಂಎಫ್ ಕೋರ್ಟಿಗೆ ಖಾಸಗಿ ದೂರು ನೀಡಿದ್ದರು. ಕೋರ್ಟ್ ಆದೇಶ ನೀಡಿದಂತೆ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. ಕೊಟ್ಟಾರಿ ವಿರುದ್ಧ ಬರ್ಕೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಡೆದ ಘಟನೆ ಏನು..?
ಇಬ್ಬರು ಯುವಕರು ತನ್ನ ಮೇಲೆ ದಾಳಿ ಮಾಡಿದ್ದ ಬಗ್ಗೆ ಜಿತೇಂದ್ರ ಕೊಟ್ಟಾರಿ ಅವರು ಪೊಲೀಸರಿಗೆ ದೂರು ನೀಡಿದ್ದರು. ಈ ಪೈಕಿ ಆರೋಪಿ ತನುಷ್ ಶೆಟ್ಟಿ ಪರವಾಗಿ ಮಾತನಾಡಲು ಪ್ರಸನ್ನ ರವಿ ಅವರು ಠಾಣೆಗೆ ತೆರಳಿದ್ದರು. ಈ ವೇಳೆ ಆಕ್ರೋಶಗೊಂಡ ಜಿತೇಂದ್ರ ಕೊಟ್ಟಾರಿ ತನ್ನೊಂದಿಗೆ ಇದ್ದ ಸಹಚರರ ಜೊತೆ ಸೌಜನ್ಯ ಹೋರಾಟದಲ್ಲಿ ಹೆಣ್ಣು ಮಕ್ಕಳನ್ನು ಮುಂದಿಟ್ಟು ದಂಧೆ ಮಾಡುವವಳು ಎಂದು ಮೂದಲಿಸಿ ಅವಮಾನಿಸಿದ್ದಾರೆ.
ಇದು ನನ್ನ ಮಾನಕ್ಕೆ ಕುಂದುಂಟಾಗುವಂತಹ ಹೇಳಿಕೆ ಎಂದು ಆರೋಪಿಸಿ ಪ್ರಸನ್ನ ರವಿ ಕೇಸು ದಾಖಲಿಸಿದ್ದಾರೆ.