ತುಂಗಭದ್ರಾ: ಅರಣ್ಯ ಸಂಪತ್ತು, ನೀರಿನ ಜಲಾಶಯ, ಇತರೆ ನೈಸರ್ಗಿಕ ಸಂಪನ್ಮೂಲಗಳ ಬಳಕೆ ಅದರ ಜವಾಬ್ದಾರಿ ಪ್ರತಿಯೊಬ್ಬ ಪ್ರಜೆಯದ್ದು ಆಗಿರುತ್ತದೆ. ಅದನ್ನು ಹಾನಿಗೊಳಿಸದೆ ಸುರಕ್ಷಿತ ರೀತಿಯಲ್ಲಿ ಕಾಪಾಡಿದರೆ ಅದರಿಂದ ನಮಗೇ ಒಳ್ಳೆಯದು. ಈ ನಿಯಮ ಅದೆಷ್ಟೇ ದೊಡ್ಡ ವ್ಯಕ್ತಿಯಾದರೂ, ಸೆಲೆಬ್ರೆಟಿಗಳಾದರೂ ಅವರಿಗೂ ಅನ್ವಯಿಸುತ್ತದೆ. ಇತ್ತೀಚೆಗೆ ಒಂದು ಕಿರಿಕ್ ಮಾಡಿಕೊಂಡು ಸುದ್ದಿಯಾಗಿದ್ದ ಸಚಿವ ಜಮೀರ್ ಅಹ್ಮದ್ ಚಿತ್ರತಂಡ ಇದೀಗ ಮತ್ತೊಂದು ಅವಾಂತರ ಮಾಡಿ ಸಂಕಷ್ಟಕ್ಕೆ ಸಿಲುಕಿದೆ.
ತುಂಗಭದ್ರಾ ನದಿ ತೀರದಲ್ಲಿ ಬೆಂಕಿ ಹಾಕಿ ಚಿತ್ರೀಕರಣ..!!
ಸಚಿವ ಜಮೀರ್ ಅಹ್ಮದ್ ಪುತ್ರ ಜೈದ್ ಖಾನ್ ನಟನೆಯ ಕಲ್ಟ್ ಚಿತ್ರದ ಶೂಟಿಂಗ್ ಸಂದರ್ಭ ತುಂಗಭದ್ರಾ ನದಿ ತೀರದಲ್ಲಿ ಬೆಂಕಿ ಹಾಕಿ ಚಿತ್ರೀಕರಣ ಮಾಡಿದ್ದಾರೆ. ಹಂಪಿಯ ಸ್ನಾನಘಟ್ಟದ ಎದುರು ಈ ಘಟನೆ ನಡೆದಿದೆ. ಈ ಭಾಗದಲ್ಲಿ ಹೆಚ್ಚಾಗಿ ನೀರುನಾಯಿಗಳು ಇರುತ್ತದೆ. ಆದ್ದರಿಂದ ಇದನ್ನು ನೀರುನಾಯಿ ಸುರಕ್ಷಿತ ಪ್ರದೇಶವೆಂದೇ ಕರೆಯಲಾಗುತ್ತದೆ. ಈ ಭಾಗದಲ್ಲಿ ಬೆಂಕಿ ಹಾಕದಂತೆ ಈಗಾಗಲೇ ನಿಷೇಧವೂ ಇದೆ. ಆದರೆ ಚಿತ್ರತಂಡದ ವಿರುದ್ಧ ಮಾತ್ರ ಅರಣ್ಯ ಇಲಾಖೆಯಾಗಲಿ, ಪುರಾತತ್ತ್ವ ಇಲಾಖೆಯಾಗಲಿ ಧ್ವನಿ ಎತ್ತುತ್ತಿಲ್ಲ. ಈ ಬಗ್ಗೆ ಪರಿಸರವಾದಿಗಳು, ವನ್ಯಜೀವಿ ಪ್ರೇಮಿಗಳು ಬೇಸರವನ್ನು ವ್ಯಕ್ತಪಡಿಸಿದ್ದಾರೆ.
ಇಲ್ಲಿಯವರೇ ಹೀಗೆ ಮಾಡಿದ್ರೆ ಇನ್ನು ವಿದೇಶಿಗರು ಫೈರ್ ಕ್ಯಾಂಪ್ ಹಾಕೋದ್ರಲ್ಲಿ ತಪ್ಪೇನು..??
ಈಗಾಗಲೇ ಒಂದೊಮ್ಮೆ ಬರಗಾಲ ಬಂದು ಜೀವವೈವಿಧ್ಯ ಒಣಗುತ್ತಿರುವುದನ್ನು ಮನಗಂಡು ತುಂಗಭದ್ರಾ ಮಂಡಳಿಯಿಂದ ನೀರು ಬಿಡಿಸಿ ಜೀವವೈವಿಧ್ಯ ಉಳಿಸುವ ಕಾರ್ಯ ಮಾಡಲಾಗಿತ್ತು. ಈಗ ನೋಡಿದ್ರೆ ಬೆಂಕಿ ಹಾಕಿ ಶೂಟಿಂಗ್ ನಡೆಸಲಾಗಿದೆ. ನಮ್ಮವರೇ ಈ ರೀತಿ ಮಾಡಿದ್ರೆ ಇನ್ನು ವಿದೇಶಿಗರು ಬಂದು ಇಲ್ಲಿ ಫೈರ್ ಕ್ಯಾಂಪ್ ಹಾಕೋದ್ರಲ್ಲಿ ತಪ್ಪೇನಿದೆ. ಚಿತ್ರತಂಡದ ವಿರುದ್ಧ ಶೀಘ್ರವಾಗಿ ಕಠಿಣ ಕ್ರಮ ತೆಗೆದುಕೊಳ್ಳಲೇಬೇಕು ಎಂದು ಪರಿಸರಪ್ರೇಮಿಗಳು ಒತ್ತಾಯಿಸಿದ್ದಾರೆ.